ತುಮಕೂರು: ಉತ್ತರಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಜಾಗವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಛಗೊಳಿಸಿದ ಶ್ರೀರಾಮ ಸೇನೆ ಹಾಗೂ ಬಿಜೆಪಿ ಪಕ್ಷದ ಅಂಗ ಸಂಸ್ಥೆಗಳ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಟೌನ್ಹಾಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಟೌನ್ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿಂದ ಬಿಜಿಎಸ್ ವೃತ್ತದವರೆಗೆ ಪಾದಯಾತ್ರೆ ನಡೆಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಉತ್ತರಖಂಡದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ಮತ್ತು ಉತ್ತರಖಂಡದ ಸರ್ಕಾರಗಳು ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಛಗೊಳಿಸಿ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್, ಶ್ರೀರಾಮಸೇನೆಯ ಕಾರ್ಯಕರ್ತರು ಮಾಡಿರುವ ಈ ಘೋರ ಕೃತ್ಯ ಇಡೀ ರಾಷ್ಟ್ರವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಇಂದಿಗೂ ಮನುಷ್ಯರನ್ನು ಮನುಷ್ಯರೆಂದು ಒಪ್ಪಿಕೊಳ್ಳದ ಮನುವಾದಿಗಳ ಈ ನಡೆ, ಭಾರತದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 35ರಷ್ಟು ದಲಿತ ಸಮುದಾಯವಿದೆ. ಒಂದೂ ನಾವೆಲ್ಲ ಒಂದು ಎನ್ನುವವರು ಈಗ ಎಲ್ಲಿದ್ದಾರೆ. ಅವರಿಗೆ ಇದು ತಪ್ಪು ಎನಿಸುವುದಿಲ್ಲವೇ? ನಿಜಕ್ಕೂ ನಿಮಗೆ ಮನಸಾಕ್ಷಿ ಇದ್ದರೆ ಕೂಡಲೇ ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಛಗೊಳಿಸಿದ ಮತ್ತು ಅದನ್ನು ಮಾಧ್ಯಮದ ಮುಂದೆ ಸಮರ್ಥಿಸಿಕೊಂಡ ಜನರನ್ನು ಕೂಡಲೇ ಬಂಧಿಸಿ, ಮುಂದೆ ಇಂತಹ ಘಟನೆಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಂದು ಬಾಬೂಜಿಗೆ, ಈಗ ಖರ್ಗೆಗೆ ಅವಮಾನ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಾದ ಆರ್.ಎಸ್.ಎಸ್., ಶ್ರೀರಾಮಸೇನೆ, ಬಜರಂಗದಳ ಈ ದೇಶದಲ್ಲಿ ಮನುಸ್ಮೃತಿಯನ್ನು ಮತ್ತೆ ಚಲಾವಣೆಗೆ ತರಲು ಹೊರಟಿವೆ ಎಂಬುದಕ್ಕೆ ಆಗಸ್ಟ್ 11ರ ಘಟನೆ ಸಾಕ್ಷಿಯಾಗಿದೆ. ಈ ಹಿಂದೆ ಉಪ ಪ್ರಧಾನಿಯಾಗಿದ್ದ ಬಾಬು ಜಗಜೀವನ್ರಾಮ್ ಅವರು ಪುರಿಯ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಉಪ ಪ್ರಧಾನಿ ಎಂಬ ಕಾರಣಕ್ಕೆ ಅವರನ್ನು ದೇವಾಲಯದ ಒಳಗೆ ಬಿಟ್ಟು, ಅವರ ಕುಟುಂಬದವರನ್ನು ತಡೆ ಹಿಡಿದಿದ್ದರು. ಇದನ್ನು ಬಾಬೂಜಿ ಅಂದೇ ಪ್ರತಿಭಟಿಸಿದ್ದರು. ಇಂದಿಗೂ ಕರ್ನಾಟಕದ ಹಲವು ದೇವಾಲಯಗಳಲ್ಲಿ ಎಡೆಸ್ನಾನ, ಮಡೆಸ್ನಾನದಂತಹ ಪಂಕ್ತಿ ಭೇದ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರಕಾರ ದೇಶದಲ್ಲಿ ಅಸ್ಪೃಶ್ಯತೆ ತೊಲಗಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಎಂದಿದ್ದರು. ಆದರೆ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದರೂ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿಯೇ ಇದೆ ಎಂಬುದಕ್ಕೆ ಆಗಸ್ಟ್ 9ರಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಉತ್ತರಖಂಡದ ರಾಮಲೀಲಾ ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಛಗೊಳಿಸಿರುವುದೇ ಸಾಕ್ಷಿಯಾಗಿದೆ. ಇಂತಹ ಘಟನೆ ಮರುಕಳಿಸಿದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪಣು ಗಪ್ಪ, ಸೈಯದ್ ದಾದಾಪೀರ್, ನಯಾಜ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪೈಯಾಜ್, ಮಹೇಶ್, ಕವಿತಾ, ಭಾಗ್ಯಲಕ್ಷ್ಮಿ, ಶಿವಾಜಿ, ಜಿಲ್ಲಾವುಲ್ಲಾ, ಇನಾಯತ್, ಇಲಾಹಿ ಸಿಕಿಂದರ್, ನಟರಾಜಶೆಟ್ಟಿ, ಸುಜಾತ, ಕೆಂಪಣ್ಣ, ವೈ. ಎನ್. ನಾಗರಾಜು, ಇರ್ಫಾನ್ ಅಹಮದ್, ಆದಿಲ್, ಸುಮತಿ, ಮುಬೀನಾ, ರೇವಣ್ಣ ಸಿದ್ದಯ್ಯ, ಸಿದ್ದಲಿಂಗೇಗೌಡ, ಮಂಜುನಾಥ್, ಲಕ್ಷ್ಮಿನಾರಾಯಣ, ಬೈಲಸ್ವಾಮಿ, ನಿಂಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
