ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ನಡೆದಿದ್ದ ಭೀಕರ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮರುಜೀವ ಬಂದಿದೆ. ಪ್ರಕರಣದ ಮರುತನಿಖೆ ನಡೆಸಲು ರಾಜ್ಯ ಸರ್ಕಾರವು ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಹೊಸದಾಗಿ ತನಿಖೆ ನಡೆಸಿ ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತ್ತು.
ಎಸ್ ಐಟಿ (SIT) ತಂಡದ ಸದಸ್ಯರು:
- ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ (ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಡಿಐಜಿ)
- ನಿಶಾ ಜೇಮ್ಸ್ (ಬೆಂಗಳೂರಿನ ಗುಪ್ತಚರ ವಿಭಾಗದ ಎಸ್‌ಪಿ)
- ಲೋಕೇಶ್ ಜಗಲಾಸರ್ (ಬೆಂಗಳೂರಿನ ಸಿಐಡಿ ಎಸ್‌ಪಿ)
- ವೆಂಕಟೇಶ್ ಪ್ರಸನ್ನ (ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ)
ಪ್ರಕರಣದ ಹಿನ್ನೆಲೆ:
ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಸೌಜನ್ಯ, 2012ರ ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗೆ ಹಿಂದಿರುಗುವಾಗ ನಾಪತ್ತೆಯಾಗಿದ್ದರು. ಮರುದಿನ ಧರ್ಮಸ್ಥಳದ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ಈ ಹಿಂದೆ ಕರ್ನಾಟಕ ಅಪರಾಧ ತನಿಖಾ ದಳ (ಸಿಐಡಿ) ಹಾಗೂ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಿದ್ದರೂ, ಪ್ರಕರಣದ ನಿಜವಾದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದವು. ಈ ಪ್ರಕರಣದ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ಸುಮಾರು ಆರು ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿದ್ದು, 2023ರ ಜೂನ್‌ನಲ್ಲಿ ವಿಚಾರಣಾ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು.
ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಮತ್ತು ಪ್ರಕರಣದ ಮರುತನಿಖೆಗಾಗಿ ಸೌಜನ್ಯ ತಾಯಿ ಕುಸುಮಾವತಿ ಅವರು ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. 2024ರಲ್ಲಿ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದ ಬಳಿಕ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆರಂಭದಲ್ಲಿ ರಾಜ್ಯ ಸರ್ಕಾರ ಈ ಮರುತನಿಖೆ ಅರ್ಜಿಯನ್ನು ವಿರೋಧಿಸಿದ್ದರೂ, ನಂತರ ತನ್ನ ನಿಲುವನ್ನು ಬದಲಿಸಿಕೊಂಡು ಎಸ್ ಐಟಿ ರಚಿಸಿ ಹೊಸ ತನಿಖೆ ನಡೆಸಲು ಸಿದ್ಧವಿರುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಸರ್ಕಾರದ ಈ ಹೊಸ ಎಸ್‌ಐಟಿ ರಚನೆಯಿಂದಾಗಿ ಸೌಜನ್ಯ ಕುಟುಂಬದವರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
