ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಭಾರೀ ಗದ್ದಲ ಹಾಗೂ ಆರೋಪ-ಪ್ರತ್ಯಾರೋಪಗಳ ನಡುವೆ ಅರ್ಧದಲ್ಲೇ ಮುಂದೂಡಲ್ಪಟ್ಟಿದೆ. ಸೊಸೈಟಿಯ ಕಾರ್ಯದರ್ಶಿ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳು ಮತ್ತು ಎರಡು ಗುಂಪುಗಳ ನಡುವಿನ ಒಳಜಗಳದಿಂದ ಸಭೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಸಭೆಯಲ್ಲಿ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕೋಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ಗುಂಪುಗಳನ್ನು ಸಮಾಧಾನಪಡಿಸಬೇಕಾಯಿತು.
ಸಂಘದ ಮಾಜಿ ಅಧ್ಯಕ್ಷ ಧನಂಜಯ ಅವರು ಸಭೆಯಲ್ಲಿ ಮಾತನಾಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಅವರು ಕಳೆದ ಒಂದು ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದೆ ಅಕ್ರಮವಾಗಿ ಸಂಬಳ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯದರ್ಶಿಯವರ ಸ್ವಂತ ಮಗನನ್ನೇ ಕಂಪ್ಯೂಟರ್ ಆಪರೇಟರ್ ಆಗಿ ಆಯ್ಕೆ ಮಾಡಲಾಗಿದೆ ಎಂದ ಅವರು, ಅಮಾಯಕ ನಿರುದ್ಯೋಗಿಯೊಬ್ಬರಿಗೆ ಕೆಲಸ ಕೊಡಿಸುವ ನೆಪದಲ್ಲಿ 3 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ದೂರಿದರು. ಎಆರ್ ಹಾಗೂ ಡಿಆರ್ ಅಧಿಕಾರಿಗಳ ಕುಮ್ಮಕ್ಕಿನಿಂದ ಈ ಅಕ್ರಮಗಳು ನಡೆಯುತ್ತಿದ್ದು, ಸಮಗ್ರ ತನಿಖೆ ಮುಗಿಯುವವರೆಗೆ ಕಾರ್ಯದರ್ಶಿ ಹಾಗೂ ಅವರ ಮಗನನ್ನು ಕಚೇರಿಯಿಂದ ಹೊರಗಿಡಬೇಕು ಎಂದು ಅವರು ಬಲವಾಗಿ ಆಗ್ರಹಿಸಿದರು.
ಮಾವತ್ತೂರು ಮಂಜುನಾಥ್ ಎಂಬ ಸ್ಥಳೀಯ ಮುಖಂಡ ಮಾತನಾಡಿ, ಮಾಜಿ ಅಧ್ಯಕ್ಷ ಧನಂಜಯ ಅವರ ಅವಧಿಯಲ್ಲಿ ರೈತರಿಗೆ ಸರ್ಕಾರದ ಸವಲತ್ತುಗಳು ಸರಿಯಾಗಿ ತಲುಪದ ಕಾರಣ 6 ಜನ ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು. ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈಗಾಗಲೇ ಸೂಪರ್ಸೀಡ್ ಆಗಿದ್ದು, ಮಾಜಿ ಅಧ್ಯಕ್ಷರು ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡದೆ ಗಲಾಟೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ, ತಮಗೆ ವಿನಾಕಾರಣ ಕೆಲಸ ಮಾಡಲು ಬಿಡುತ್ತಿಲ್ಲವೆಂದೂ, ತಾವೇ ಯಾವುದೇ ಹಣ ದುರುಪಯೋಗಪಡಿಸಿಕೊಂಡಿಲ್ಲವೆಂದೂ ಸ್ಪಷ್ಟಪಡಿಸಿದರು. ಒಂದು ವೇಳೆ ತಪ್ಪು ಸಾಬೀತಾದರೆ ಯಾವುದೇ ಕಾನೂನು ಕ್ರಮವನ್ನಾದರೂ ಸ್ವೀಕರಿಸಲು ಸಿದ್ಧನಿರುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಹೆಚ್.ಸಿ.ತಿಮ್ಮರಾಜು ಮಾತನಾಡಿ, ಸಿಇಒ ತಿಮ್ಮಯ್ಯ ಅವರು ಜೂನ್ ನಿಂದ ಇಲ್ಲಿಯವರೆಗೆ ಯಾವುದೇ ಸಂಬಳ ತೆಗೆದುಕೊಂಡಿಲ್ಲವೆಂದೂ, ನಮ್ಮ ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲವೆಂದೂ ತಿಳಿಸಿದರು. ಇದು ಕೇವಲ ಎರಡು ಗುಂಪುಗಳ ನಡುವಿನ ವೈಯಕ್ತಿಕ ದ್ವೇಷದಿಂದ ಸೃಷ್ಟಿಯಾಗಿರುವ ಗಲಾಟೆಯಾಗಿದ್ದು, ಇದರಿಂದ ಅಮಾಯಕ ರೈತರಿಗೆ ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಮಹಾಸಭೆಯ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ರೈತರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
