ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನೊಂದಿಗೆ ಮಾಡಿಕೊಂಡಿರುವ ಸಾಲದ ಒಪ್ಪಂದ ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ದತ್ತು ನೀಡುವ ನೀತಿಯನ್ನು ವಿರೋಧಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ನೇತೃತ್ವದಲ್ಲಿ ನಗರದ ಟಿಪ್ಪುನಗರ ಹಾಗೂ ಕುಂಕಮನಹಳ್ಳಿಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನಾ ಸಭೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ AIDSO ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಿದರು. “ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಎಲೆಕ್ಟ್ರಿಕಲ್, ಪ್ಲಂಬಿಂಗ್, ಬ್ಯೂಟಿ ವೆಲ್ನೆಸ್, ಕೃಷಿ ಹಾಗೂ ತೋಟಗಾರಿಕೆಯಂತಹ ಕೌಶಲ್ಯಾಧಾರಿತ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. ಎಸ್ ಎಸ್ ಎಲ್ಸಿ ಮತ್ತು ಪಿಯು ಹಂತದಲ್ಲೇ ಶೇ. 40ರಷ್ಟು ವಿದ್ಯಾರ್ಥಿಗಳು ಶಿಕ್ಷಣ ತೊರೆಯುತ್ತಿದ್ದಾರೆ ಎಂಬ ನೆಪವೊಡ್ಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಡಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಬದಲು, ಅವರನ್ನು ಶಿಕ್ಷಣದಿಂದಲೇ ದೂರ ತಳ್ಳುವುದು ಸರ್ಕಾರದ ಉದ್ದೇಶವಾಗಿದೆ” ಎಂದು ಆರೋಪಿಸಿದರು.
ಮಾತು ಮುಂದುವರಿಸಿದ ಅವರು, “ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಸಾರ್ವಜನಿಕ ಶಿಕ್ಷಣ ವಿರೋಧಿ ಎನ್ಇಪಿ-2020 (NEP-2020) ನೀತಿಯನ್ನೇ ರಾಜ್ಯ ಸರ್ಕಾರ ಈಗ ಪರೋಕ್ಷವಾಗಿ ಅನುಷ್ಠಾನಗೊಳಿಸುತ್ತಿದೆ. ಹಣವಂತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಗಣಿತ, ವಿಜ್ಞಾನ ಕಲಿತು ಉನ್ನತ ಶಿಕ್ಷಣಕ್ಕೆ ಸಿದ್ಧರಾದರೆ, ಬಡಮಕ್ಕಳನ್ನು ಕೌಶಲ್ಯದ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಅಗ್ಗದ ಕಾರ್ಮಿಕರನ್ನಾಗಿಸುವ ಷಡ್ಯಂತ್ರ ನಡೆಯುತ್ತಿದೆ. ಕೆಪಿಎಸ್ (KPS) ಯೋಜನೆಗಾಗಿ ಎಡಿಬಿಯಿಂದ ಪಡೆದಿರುವ ₹2,000 ಕೋಟಿ ಫಲಿತಾಂಶ ಆಧಾರಿತ ಸಾಲದ ಕರಾರುಗಳ ಭಾಗವಾಗಿ ಈ ‘ಕೌಶಲ್ಯದ ನಾಟಕ’ ಆರಂಭವಾಗಿದೆ. ದೇಶದ ಹೆಮ್ಮೆಯ ಸರ್ ಎಂ. ವಿಶ್ವೇಶ್ವರಯ್ಯ, ಸಿ.ವಿ. ರಾಮನ್ ಅಂತಹ ಮೇರು ವ್ಯಕ್ತಿಗಳಿಗೆ ಶಾಲೆಯಲ್ಲಿ ಯಾವ ಕೌಶಲ್ಯ ತರಬೇತಿ ನೀಡಲಾಗಿತ್ತು?” ಎಂದು ಪ್ರಶ್ನಿಸಿದರು. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಹಾಗೂ ಜನತೆ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಹೋರಾಟವನ್ನು ಬಲಪಡಿಸಬೇಕೆಂದು ಕರೆ ನೀಡಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಹಾಗೂ ಸಾಹಿತಿ ಮೊಹಸಿನ್ ಬಾನು ಮಾತನಾಡಿ, “ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಸರ್ಕಾರದ ಸಂಪೂರ್ಣ ಜವಾಬ್ದಾರಿ. ಆದರೆ, ಸರ್ಕಾರ ಶಾಲೆಗಳನ್ನು ಮುಚ್ಚುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಕನ್ನಡ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬ ಸಾಹಿತಿ ಮತ್ತು ಬರಹಗಾರರ ಕರ್ತವ್ಯವಾಗಿದೆ. ನಾನೊಬ್ಬ ಬರಹಗಾರಳಾಗಿ ಈ ಹೋರಾಟದಲ್ಲಿ ನನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಎಲ್ಲಾ ಸಾಹಿತಿಗಳು, ಬರಹಗಾರರು ಹಾಗೂ ಸಾರ್ವಜನಿಕರು ಇದರ ಗಂಭೀರತೆಯನ್ನು ಅರಿತು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ AIDSO ಕಾರ್ಯಕರ್ತರಾದ ಸೈಯದ್, ಉಮೇಶ್, ನಂದನ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಮಂಜುಳಾ, ನರಸಿಂಹರಾಜು, ಶ್ರೀಧರ್ ಮೂರ್ತಿ, ಮೊಹಸಿನ್ ಬಾನು, ಅಮಿದ್ ಖಾನ್, ಅಪ್ಸನಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
