ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಮತದಾರರ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ, ಅರ್ಹ ಬಡವರು, ಅಲ್ಪಸಂಖ್ಯಾತರು ಹಾಗೂ ಅವಿದ್ಯಾವಂತ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲು ಒಳಸಂಚು ರೂಪಿಸಿದ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 32 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಸಂದರ್ಭದಲ್ಲಿ ಯಾವುದೇ ಅಧಿಕೃತ ದಾಖಲೆಗಳು ಅಥವಾ ಆಧಾರವಿಲ್ಲದೆ ಫಾರಂ-7ರ ಅಡಿಯಲ್ಲಿ ಸುಮಾರು 3,244 ಮತದಾರರನ್ನು ‘ಸ್ಥಳಾಂತರ’ ಹಾಗೂ ‘ಗೈರು’ ಎಂದು ನಮೂದಿಸಿ ಸುಳ್ಳು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಭಾಲ್ಕಿ ನಗರದ ಬೂತ್ ನಂಬರ್ 1ರ ಮತದಾರರಾಗಿರುವ ಹಾಗೂ 2024ರಲ್ಲಿ ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಮೊಹಮ್ಮದ್ ಅತೀಕ್ ಅಹಮದ್ ಅವರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚುನಾವಣಾ ನೋಂದಣಾಧಿಕಾರಿಗಳು ಈ ಆಕ್ಷೇಪಣಾ ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದರು. ತಹಶೀಲ್ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಶಿವರಾಜ್, ದೀಪಕ್, ಗೌಸೋದ್ದಿನ್ ಸಾಬ್, ಜಗದೀಶ್, ಯೋಗೇಶ, ಕಲ್ಯಾಣರಾವ್ ಸೇರಿದಂತೆ 32 ಜನರು ದೊಡ್ಡ ಪ್ರಮಾಣದಲ್ಲಿ ನಕಲಿ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿರುವುದು ಸಂಶಯಕ್ಕೆ ಕಾರಣವಾಯಿತು.
ಆರೋಪಿಗಳು ತಮ್ಮದೇ ಕೈಯಲ್ಲಿ ಸುಳ್ಳು ಅರ್ಜಿಗಳನ್ನು ಬರೆದು, ಮತದಾರರ ಸಹಿಗಳನ್ನು ನಕಲು ಮಾಡಿ, ಸಂತ್ರಸ್ತ ಮತದಾರರ ಗಮನಕ್ಕೂ ತರದೆ ವಿಭಿನ್ನ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಭಾರತದ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಸಿದುಕೊಂಡು ಮೋಸ ಮಾಡುವ ದುರುದ್ದೇಶದಿಂದ ಈ 32 ಜನರು ವ್ಯವಸ್ಥಿತ ಒಳಸಂಚು ರೂಪಿಸಿ ಅಪರಾಧಿಕ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ.
ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ದುರುದ್ದೇಶದಿಂದ ಈ ಕೃತ್ಯ ಎಸಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದ್ದು, ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 61(2), 319(2), 336(2), 336(3), 340(2) ಹಾಗೂ 190ರ ಅಡಿಯಲ್ಲಿ 32 ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
