ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಚಿತ್ರಕಥೆಗಾರ ಸಿಂಗೀತಂ ಶ್ರೀನಿವಾಸ ರಾವ್ (94) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾಗಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವು ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ನಿರ್ದೇಶಿಸಿ ತಮ್ಮದೇ ಛಾಪು ಮೂಡಿಸಿದ್ದರು.
ಕನ್ನಡ ಚಿತ್ರರಂಗದೊಂದಿಗೆ ಸಿಂಗೀತಂ ಶ್ರೀನಿವಾಸ ರಾವ್ ಅವರದ್ದು ವಿಶೇಷ ನಂಟು. ಅದರಲ್ಲೂ ವರನಟ ಡಾ. ರಾಜ್ಕುಮಾರ್ ಕುಟುಂಬದೊಂದಿಗೆ ಅವರು ಹೊಂದಿದ್ದ ವೃತ್ತಿಪರ ಹಾಗೂ ಆತ್ಮೀಯ ಸಂಬಂಧ ಗಮನಾರ್ಹವಾಗಿತ್ತು.1970ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ‘ಸಂಸ್ಕಾರ’ ಸಿನಿಮಾದಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಿಂಗೀತಂ ಶ್ರೀನಿವಾಸ ರಾವ್, ಬಳಿಕ 1982ರಲ್ಲಿ ಡಾ. ರಾಜ್ಕುಮಾರ್ ಅಭಿನಯದ ‘ಹಾಲು ಜೇನು’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಇದಾದ ಬಳಿಕ ಡಾ. ರಾಜ್ಕುಮಾರ್ ಅವರೊಂದಿಗೆ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’, ‘ಜ್ವಾಲಾಮುಖಿ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಗೂ ‘ದೇವತಾ ಮನುಷ್ಯ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದರು. ಡಾ. ರಾಜ್ಕುಮಾರ್ ಅವರ ಐತಿಹಾಸಿಕ 200ನೇ ಚಿತ್ರ ‘ದೇವತಾ ಮನುಷ್ಯ’ಕ್ಕೂ ಅವರೇ ನಿರ್ದೇಶಕರಾಗಿದ್ದರು.
ಶಿವರಾಜ್ಕುಮಾರ್ ಅವರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ‘ಆನಂದ್’ ಚಿತ್ರಕ್ಕೂ ಸಿಂಗೀತಂ ಶ್ರೀನಿವಾಸ ರಾವ್ ಅವರೇ ನಿರ್ದೇಶಕರಾಗಿದ್ದರು. ಇದೇ ರೀತಿ ರಾಘವೇಂದ್ರ ರಾಜ್ಕುಮಾರ್ ಅಭಿನಯದ ‘ಚಿರಂಜೀವಿ ಸುಧಾಕರ್’ ಚಿತ್ರಕ್ಕೂ ಅವರು ಸಾರಥ್ಯ ವಹಿಸಿದ್ದರು.ನಿರ್ದೇಶನದ ಜೊತೆಗೆ ಸಂಗೀತ, ಚಿತ್ರಕಥೆ ಸೇರಿದಂತೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ಸಿಂಗೀತಂ ಅವರು ತಮ್ಮ ಪ್ರತಿಭೆ ಮೆರೆದಿದ್ದರು. ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಮತ್ತು ‘ಸಂಯುಕ್ತ’ ಚಿತ್ರಗಳಿಗೆ ಸಂಗೀತ ನೀಡಿದ್ದ ಅವರು, ‘ಶ್ರುತಿ ಸೇರಿದಾಗ’ ಹಾಗೂ ‘ಬೆಳ್ಳಿಯಪ್ಪ ಬಂಗಾರಪ್ಪ’ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದರು.
ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣದ ಹಲವು ಚಿತ್ರಗಳಿಗೂ ಸಿಂಗೀತಂ ಶ್ರೀನಿವಾಸ ರಾವ್ ಪ್ರಮುಖವಾಗಿ ಕೆಲಸ ಮಾಡಿದ್ದರು. ತಮ್ಮ ಸುದೀರ್ಘ ಸಿನಿ ಪಯಣದಲ್ಲಿ ಅವರು ಮೂರು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು.
ವಿಭಿನ್ನ ಕಥೆಗಳನ್ನು ಹೊಸತನದೊಂದಿಗೆ ತೆರೆಗೆ ತರುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನಕ್ಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗ ಒಬ್ಬ ಸೃಜನಶೀಲ ನಿರ್ದೇಶಕನನ್ನು ಕಳೆದುಕೊಂಡಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
