ಬೆಂಗಳೂರು: ನಗರದಲ್ಲಿ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಿದ್ಧತೆ ನಡೆಸಿದೆ. ನಗರದ ಹೊರವಲಯದ ಬಿಡದಿ, ಹಾರೋಹಳ್ಳಿ, ಅತ್ತಿಬೆಲೆ, ತುಮಕೂರು ಹಾಗೂ ಹೊಸಕೋಟೆ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗೆ ಸಂಬಂಧಿಸಿದ ಕಾರ್ಯಸಾಧ್ಯತಾ ವರದಿ (Feasibility Study) ಇದೀಗ BMRCL ಕೈ ಸೇರಿದೆ.
ಪ್ರಸ್ತುತ ಸಿದ್ಧವಾಗಿರುವ ವರದಿಯನ್ನು ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಸರ್ಕಾರದಿಂದ ಅನುಮೋದನೆ ದೊರೆತ ಬಳಿಕ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಲಿದೆ. ನಂತರ ಯೋಜನೆಗೆ ಅಂತಿಮ ಅನುಮೋದನೆ ಪಡೆಯಲು ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕಳುಹಿಸಲಾಗುತ್ತದೆ.
ಮೆಟ್ರೋ ವಿಸ್ತರಣೆಯ ಪ್ರಸ್ತಾವನೆಯಲ್ಲಿ ಒಟ್ಟು 6 ಪ್ರಮುಖ ಮಾರ್ಗಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ನಗರದ ವಿವಿಧ ಭಾಗಗಳನ್ನು ಹೊರವಲಯದ ಪ್ರದೇಶಗಳೊಂದಿಗೆ ಸಂಪರ್ಕಿಸುವ ಮಾರ್ಗಗಳಿಗೆ ಆದ್ಯತೆ ನೀಡಲಾಗಿದೆ.
ಚಲ್ಲಘಟ್ಟ–ಬಿಡದಿ: 15 ಕಿ.ಮೀ
ಸಿಲ್ಕ್ ಇನ್‌ಸ್ಟಿಟ್ಯೂಟ್–ಹಾರೋಹಳ್ಳಿ: 24 ಕಿ.ಮೀ
ಬೊಮ್ಮಸಂದ್ರ–ಅತ್ತಿಬೆಲೆ: 11 ಕಿ.ಮೀ
ಮಾದವಾರ–ತುಮಕೂರು: 60 ಕಿ.ಮೀ
ಕೆ.ಆರ್. ಪುರ–ಹೊಸಕೋಟೆ–ಬೂದಿಗೆರೆ ಕ್ರಾಸ್: 16 ಕಿ.ಮೀ
ಕಾಳೇನ ಅಗ್ರಹಾರ–ಕಾಡುಗೋಡಿ ಟ್ರೀ ಪಾರ್ಕ್: 68 ಕಿ.ಮೀ
ಈ ಪೈಕಿ ಕಾಳೇನ ಅಗ್ರಹಾರದಿಂದ ಕಾಡುಗೋಡಿ ಟ್ರೀ ಪಾರ್ಕ್‌ವರೆಗಿನ 68 ಕಿ.ಮೀ ಮಾರ್ಗ ಅತ್ಯಂತ ಉದ್ದದ ಪ್ರಸ್ತಾವಿತ ಮಾರ್ಗವಾಗಿದೆ.
ರಾಜ್ಯ ಸರ್ಕಾರದಿಂದ ಹಸಿರು ನಿಶಾನೆ ದೊರೆತ ನಂತರ ಡಿಪಿಆರ್ ಸಿದ್ಧಪಡಿಸುವ ಕೆಲಸ ಆರಂಭವಾಗಲಿದ್ದು, ಯೋಜನೆಯ ವೆಚ್ಚ, ನಿಲ್ದಾಣಗಳ ಸಂಖ್ಯೆ, ನಿಖರ ಮಾರ್ಗ ಹಾಗೂ ಅನುಷ್ಠಾನದ ಹಂತಗಳ ಕುರಿತು ಹೆಚ್ಚಿನ ವಿವರಗಳು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಈ ವಿಸ್ತರಣೆಗಳು ಅನುಷ್ಠಾನಗೊಂಡರೆ ಬೆಂಗಳೂರು ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳು ಹಾಗೂ ಕೈಗಾರಿಕಾ ಪ್ರದೇಶಗಳಿಗೂ ಮೆಟ್ರೋ ಸಂಪರ್ಕ ಮತ್ತಷ್ಟು ವಿಸ್ತರಿಸುವ ಸಾಧ್ಯತೆಯಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
