ಪಾವಗಡ: ತೋಟಗಾರಿಕೆ ಇಲಾಖೆಯ ನೀರಾವರಿ ಯೋಜನೆಯಡಿ ಹನಿ ನೀರಾವರಿ (ಡ್ರಿಪ್) ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿ, ನಿಗದಿತ ವಂತಿಕೆ ಪಾವತಿಸಿದ್ದರೂ ರೈತರಿಗೆ ಇದುವರೆಗೆ ಡ್ರಿಪ್ ಪರಿಕರಗಳು ವಿತರಣೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಕುರಿಮಲ್ಲಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಅವರಿಗೆ ಮನವಿ ಸಲ್ಲಿಸಿ, ಕೂಡಲೇ ರೈತರಿಗೆ ಡ್ರಿಪ್ ಪರಿಕರಗಳನ್ನು ವಿತರಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುರಿಮಲ್ಲಪ್ಪ, ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಯರಮ್ಮನಹಳ್ಳಿ ಗ್ರಾಮದ ಎ. ನಾಗರಾಜು, ಮಲ್ಲೇಶ್ ಹಾಗೂ ಸೂಲನಾಯಕನಹಳ್ಳಿ ಗ್ರಾಮದ ರಾಮಕೃಷ್ಣ, ರವಿಚಂದ್ರ ಸೇರಿದಂತೆ ಹಲವು ರೈತರು ಓಂ ಕಂಪನಿಗೆ ನಿಗದಿತ ವಂತಿಕೆ ಪಾವತಿಸಿ ಡ್ರಿಪ್ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕಂಪನಿಯಿಂದ ಇದುವರೆಗೆ ಡ್ರಿಪ್ ವೈರ್ ಸೇರಿದಂತೆ ಅಗತ್ಯ ಪರಿಕರಗಳು ಸರಬರಾಜಾಗಿಲ್ಲ ಎಂದು ಆರೋಪಿಸಿದರು.
ಇದೇ ಗ್ರಾಮದ ದಾಳಿಂಬೆ ಬೆಳೆಗಾರ ಕೃಷ್ಣಮೂರ್ತಿ ಅವರು ಪಿ.ವಿ.ಜಿ.ಆರ್.ಜಿ. ಯೋಜನೆಯಡಿ ಅನುದಾನಕ್ಕಾಗಿ ಮನವಿ ಮಾಡಿದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಉತ್ತರ ನೀಡಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾವಗಡ ತಾಲ್ಲೂಕಿನಲ್ಲಿ ಸುಮಾರು 1,000 ಅಡಿ ಆಳಕ್ಕೆ ಬೋರ್ವೆಲ್ ಕೊರೆದರೂ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಅಲ್ಪಸ್ವಲ್ಪ ಲಭ್ಯವಾಗುವ ಅರ್ಧ ಇಂಚಿನ ನೀರನ್ನೇ ಹನಿ ನೀರಾವರಿ ಪದ್ಧತಿಯ ಮೂಲಕ ಬಳಸಿಕೊಂಡು ಕೃಷಿ ಮಾಡಿ ಜೀವನ ಸಾಗಿಸಲು ರೈತರು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಂತಿಕೆ ಪಾವತಿಸಿದರೂ ಕಂಪನಿಯಿಂದ ಪರಿಕರಗಳು ಪೂರೈಕೆಯಾಗದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ತಿಳಿಸಿದರು.
ಆದ್ದರಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ರೈತರಿಗೆ ಪರ್ಯಾಯ ಕಂಪನಿಯ ಮೂಲಕ ತಕ್ಷಣವೇ ಡ್ರಿಪ್ ಪರಿಕರಗಳನ್ನು ವಿತರಿಸಬೇಕು. ರೈತರು ಸಲ್ಲಿಸಿರುವ ಅರ್ಜಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ರಾಮಮೂರ್ತಿ, ಗೌರವಾಧ್ಯಕ್ಷ ನಾಗರಾಜಪ್ಪ, ನಿಂಗಶೆಟ್ಟಿ, ಭೀಮಣ್ಣ, ಶಿವು, ನರಸಪ್ಪ, ಹೊನ್ನೂರಪ್ಪ, ಶಾಂತರಾಜು, ಹನುಮಂತರಾಯ, ಬೋರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
