ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಜೈಲರ್ 2’ (Jailer 2) ಚಿತ್ರದ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಜನಿಕಾಂತ್ ಅವರ ಅಬ್ಬರ ಹಾಗೂ ಘಟಾನುಘಟಿ ನಟರ ಸಂಗಮ ನೋಡುಗರ ಗಮನ ಸೆಳೆಯುತ್ತಿದೆ.
2023ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ‘ಜೈಲರ್’ ಸಿನಿಮಾದ ಮುಂದುವರಿದ ಭಾಗವಾಗಿ ‘ಜೈಲರ್ 2’ ಮೂಡಿಬಂದಿದೆ. ರಜನಿಕಾಂತ್ ಅವರ 172ನೇ ಸಿನಿಮಾವಾಗಿರುವ ಇದು, ಬರುವ ಅಕ್ಟೋಬರ್ 15ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.
ಈ ಸಿನಿಮಾದಲ್ಲೂ ರಜನಿಕಾಂತ್ ಅವರು ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಪಾತ್ರದಲ್ಲೇ ಕಾಣಿಸಿಕೊಂಡಿದ್ದು, ಅವರ ಮಾಸ್ ಲುಕ್ ಮತ್ತು ಆ್ಯಕ್ಷನ್ ದೃಶ್ಯಗಳು ಟ್ರೇಲರ್ ನಲ್ಲಿ ಹೈಲೈಟ್ ಆಗಿವೆ. ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (ಶಿವಣ್ಣ), ವಿಜಯ್ ಸೇತುಪತಿ, ಸುರಾಜ್ ವೆಂಜಾರಮೂಡು, ಎಸ್.ಜೆ. ಸೂರ್ಯ, ವಿದ್ಯಾ ಬಾಲನ್, ರಮ್ಯಾ ಕೃಷ್ಣನ್ ಸೇರಿದಂತೆ ಹಲವಾರು ಜನಪ್ರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೊದಲ ಭಾಗದಲ್ಲಿ ವಿನಾಯಕನ್ ನಿರ್ವಹಿಸಿದ್ದ ವಿಲನ್ ಪಾತ್ರ ಗಮನ ಸೆಳೆದಿತ್ತು. ಆದರೆ ‘ಜೈಲರ್ 2’ ನಲ್ಲಿ ಮಲಯಾಳಂ ನಟ ಸುರಾಜ್ ವೆಂಜಾರಮೂಡು ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟ್ರೇಲರ್ ಅನ್ನು ಗಮನಿಸಿದರೆ, ತಮಿಳುನಾಡು ಮತ್ತು ಕೇರಳದ ಹಿನ್ನೆಲೆಯ ಗ್ಯಾಂಗ್ ಸ್ಟರ್ ಕಥೆಯೊಂದು ಸಿನಿಮಾದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ರಜನಿ ಹಾಗೂ ಶಿವಣ್ಣನವರ ಒಡನಾಟದ ದೃಶ್ಯಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ.
‘ಜೈಲರ್ 2’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ (Adults Only) ಸರ್ಟಿಫಿಕೇಟ್ ದೊರೆತಿದೆ ಎನ್ನಲಾಗಿದೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.
ಅಕ್ಟೋಬರ್ 15ರಂದು ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬಿಡುಗಡೆಗೊಂಡಿರುವ ಈ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಯಾವ ರೀತಿಯ ಸದ್ದು ಮಾಡಲಿದೆ ಎಂಬ ಕಾತುರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
