ನಿದ್ದೆ ಪ್ರತಿಯೊಬ್ಬ ಜೀವಿಗೂ ಅತ್ಯಗತ್ಯ. ಒಂದು ದಿನ ಸರಿಯಾಗಿ ನಿದ್ದೆ ಮಾಡದಿದ್ದರೂ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ನಿದ್ದೆ ಮಾಡುವುದೇ ಒಂದು ಸ್ಪರ್ಧೆಯಾಗಿ, ಅದರಲ್ಲಿ ಗೆದ್ದವರಿಗೆ ಲಕ್ಷಾಂತರ ರೂಪಾಯಿ ಬಹುಮಾನ ನೀಡಿದರೆ ಹೇಗಿರುತ್ತದೆ? ಇಂತಹ ವಿಶಿಷ್ಟ ಸ್ಪರ್ಧೆಯೊಂದು ಜಪಾನ್ ನ ಟೋಕಿಯೊದಲ್ಲಿ ನಡೆದಿದೆ.‘ಮ್ಯಾಟ್ ರೇಸ್’ ಹೆಸರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು ಸುಮಾರು 90 ನಿಮಿಷಗಳ ಕಾಲ ನಿದ್ದೆ ಮಾಡಬೇಕಿತ್ತು. ಆದರೆ ಇಲ್ಲಿ ಯಾರು ಮೊದಲು ನಿದ್ದೆಗೆ ಜಾರಿದರು ಎಂಬುದಕ್ಕಿಂತ ಯಾರು ಉತ್ತಮ ಗುಣಮಟ್ಟದ ನಿದ್ದೆ ಮಾಡಿದರು ಎಂಬುದೇ ಮುಖ್ಯವಾಗಿತ್ತು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಆರಾಮದಾಯಕ ಮ್ಯಾಟ್ರೆಸ್‌ಗಳ ಮೇಲೆ ಮಲಗಲು ವ್ಯವಸ್ಥೆ ಮಾಡಲಾಗಿತ್ತು. ಸ್ಪರ್ಧಿಗಳ ನಿದ್ದೆಯನ್ನು ವಿಶೇಷ ಸಾಧನಗಳ ಮೂಲಕ ಮೇಲ್ವಿಚಾರಣೆ ಮಾಡಲಾಯಿತು.ಅವರು ಎಷ್ಟು ಬೇಗ ನಿದ್ದೆಗೆ ಜಾರಿದರು, ಎಷ್ಟು ಆಳವಾಗಿ ನಿದ್ದೆ ಮಾಡಿದರು, ನಿದ್ದೆ ಎಷ್ಟು ಸ್ಥಿರವಾಗಿತ್ತು ಮತ್ತು ಒಟ್ಟಾರೆ ನಿದ್ದೆಯ ಗುಣಮಟ್ಟ ಹೇಗಿತ್ತು ಎಂಬ ಅಂಶಗಳನ್ನು ಆಧರಿಸಿ ಅಂಕಗಳನ್ನು ನೀಡಲಾಯಿತು.
ಹೀಗಾಗಿ ಮೊದಲು ಕಣ್ಣು ಮುಚ್ಚಿದವರೇ ವಿಜೇತರಾಗುತ್ತಾರೆ ಎಂಬ ನಿಯಮ ಇರಲಿಲ್ಲ. ನಿದ್ದೆಯ ಮಧ್ಯೆ ಕೆಲವು ಅಡ್ಡಿಪಡಿಸುವ ಪ್ರಯತ್ನಗಳನ್ನೂ ಮಾಡಲಾಗಿತ್ತು. ಅವುಗಳ ನಡುವೆಯೂ ಎಚ್ಚರಗೊಳ್ಳದೆ ಉತ್ತಮ ಗುಣಮಟ್ಟದ ನಿದ್ದೆ ಮುಂದುವರಿಸಿದವರಿಗೆ ಹೆಚ್ಚಿನ ಅಂಕ ಸಿಕ್ಕಿತು.
ಈ ವಿಶಿಷ್ಟ ಸ್ಪರ್ಧೆಯಲ್ಲಿ ಭಾಗವಹಿಸಲು ಬರೋಬ್ಬರಿ 45 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು ಎಂದು ತಿಳಿದುಬಂದಿದೆ. ಅಂತಿಮವಾಗಿ ಆಯ್ಕೆಯಾದ ಸ್ಪರ್ಧಿಗಳು ಟೋಕಿಯೊದಲ್ಲಿ ನಡೆದ ವಿವಿಧ ಸುತ್ತುಗಳಲ್ಲಿ ಭಾಗವಹಿಸಿದರು.ಕೆಲವು ಸ್ಪರ್ಧಿಗಳು ನಿದ್ದೆಗೆ ಜಾರುವ ಮುನ್ನ ತಮ್ಮ ನೆಚ್ಚಿನ ಆಟಿಕೆಗಳನ್ನೂ ಜೊತೆಯಲ್ಲಿ ತಂದಿದ್ದರು. ಸ್ಪರ್ಧಿಗಳ ತಲೆಗೆ ನಿದ್ದೆಯ ವಿವಿಧ ಹಂತಗಳನ್ನು ಮೇಲ್ವಿಚಾರಣೆ ಮಾಡುವ ಸಾಧನಗಳನ್ನು ಅಳವಡಿಸಲಾಗಿತ್ತು.
ಸ್ಪರ್ಧೆಯಲ್ಲಿ ‘Suimii’ ಎಂಬ ಅಡ್ಡಹೆಸರಿನಿಂದ ಗುರುತಿಸಿಕೊಂಡ ಸ್ಪರ್ಧಿ ವಿಜೇತರಾಗಿದ್ದಾರೆ. ಅವರಿಗೆ 2.22 ಮಿಲಿಯನ್ ಜಪಾನೀಸ್ ಯೆನ್ ಬಹುಮಾನವಾಗಿ ದೊರೆತಿದ್ದು, ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು ₹12 ಲಕ್ಷ ಆಗುತ್ತದೆ.ಬಹುಮಾನದ ಹಣವನ್ನು ಹೊಸ ಮನೆಗೆ ಸ್ಥಳಾಂತರಗೊಳ್ಳುವ ವೆಚ್ಚಕ್ಕೆ ಬಳಸುವುದಾಗಿ ವಿಜೇತರು ಹೇಳಿದ್ದಾರೆ. ಜೊತೆಗೆ ತಮಗೆ ಇಷ್ಟವಾದ ‘ಪ್ರಿನ್ಸೆಸ್ ಬೆಡ್’ ಖರೀದಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಈ ಸ್ಪರ್ಧೆಯ ಹಿಂದೆ ಕೇವಲ ಮನರಂಜನೆಯ ಉದ್ದೇಶವಿರಲಿಲ್ಲ. ಜಪಾನ್‌ನಲ್ಲಿ ನಿದ್ದೆಯ ಕೊರತೆ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಉತ್ತಮ ನಿದ್ದೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವೂ ಕಾರ್ಯಕ್ರಮಕ್ಕಿತ್ತು. ನಿದ್ದೆಯನ್ನು ಒಂದು ಸ್ಪರ್ಧೆಯ ರೂಪದಲ್ಲಿ ಪರಿಚಯಿಸುವ ಮೂಲಕ ಜನರು ತಮ್ಮ ವಿಶ್ರಾಂತಿ ಮತ್ತು ನಿದ್ದೆಯ ಗುಣಮಟ್ಟದ ಬಗ್ಗೆಯೂ ಗಮನ ಹರಿಸಬೇಕು ಎಂಬ ಸಂದೇಶ ನೀಡುವುದು ಆಯೋಜಕರ ಉದ್ದೇಶವಾಗಿತ್ತು. ಹಣಕ್ಕಾಗಿ ಜನರು ಓಡುವುದು ಸಾಮಾನ್ಯ. ಆದರೆ ಹಣಕ್ಕಾಗಿ ಜನರು ಮಲಗುವ ಸ್ಪರ್ಧೆ ನಡೆದಿರುವುದು ಮಾತ್ರ ನಿಜಕ್ಕೂ ಅಚ್ಚರಿ ಮೂಡಿಸುವ ಸಂಗತಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
