ಕುಣಿಗಲ್: ಸ್ಪರ್ಧಾತ್ಮಕ ಯುಗದಲ್ಲಿ ಗೆಲುವು ಸಾಧಿಸಬೇಕು ಎಂದರೇ ಸ್ಪರ್ಧೆ ಮಾಡಲೇ ಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಕ್ತಿ ಸಂಪಾದಿಸಬೇಕು. ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಜ್ಜಾಗಿ ಎಂದು ಮಾಜಿ ಶಾಸಕ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಬಿ.ವಿ.ರಾಮಸ್ವಾಮಿಗೌಡ ಕರೆ ನೀಡಿದರು.
ಅವರು ತಾಲೂಕು ಒಕ್ಕಲಿಗರ ಸಂಘ, ಜ್ಞಾನ ಭಾರತಿ ಪದವಿ ಪೂರ್ವ ಕಾಲೇಜು, ಕೃಷಿಕ್ ಸರ್ವೋದಯ ಫೌಂಡೇಶನ್ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಜ್ಞಾನ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಂದರಲ್ಲೂ ಸ್ಪರ್ಧೆ ಮಾಡಿ ಉದ್ಯೋಗ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ವಿದ್ಯಾರ್ಥಿಗಳು ನಾಲ್ಕು ಗೋಡೆ ಮಧ್ಯೆ ಕುತು, ಪಠ್ಯ ಪುಸ್ತಕ ಹಾಗೂ ಅಂಕ ಗಳಿಸುವ ಜೊತೆಗೆ ತಮ್ಮ ಜೀವನದ ಗುರಿಯನ್ನು ರೂಪಿಸಿಕೊಂಡು ತಂದೆ, ತಾಯಿಗೆ ಆಸರೆಯಾಗಬೇಕು. ಮುಂದಿನ ಜೀವನದಲ್ಲಿ ಯಾವ ರೀತಿ ಬದುಕಬೇಕೋ ಪರಿಪಾಠವನ್ನು ಇಂದಿನಿಂದಲೇ ರೂಢಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ತರಬೇತಿಯನ್ನು ಕೃಷಿಕ್ ಸರ್ವೋದಯ ಫೌಂಡೇಶನ್ ನೀಡುತ್ತಿದೆ. ಇದಕ್ಕೆ ನಮ್ಮ ವಿದ್ಯಾಸಂಸ್ಥೆಯಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಹಾಗಾಗಿ ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಅವರು ಹೇಳಿದರು.
ಕೆಎಸ್ ಎಫ್ ಜಿಲ್ಲಾಧ್ಯಕ್ಷ ಆಡಿಟರ್ ನಾಗರಾಜ್ ಮಾತನಾಡಿ, ಅಂದು ಐಎಎಸ್ ಅಧಿಕಾರಿಯಾಗಿದ್ದ ವೈ.ಕೆ.ಪುಟ್ಟಸ್ವಾಮಿಗೌಡ ಅವರ ನೇತೃತ್ವದ ತಂಡವು ಹಳ್ಳಿಗಾಡಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಉದ್ದೇಶ ಇಟ್ಟುಕೊಂಡು 1992ರಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್ ಆರಂಭ ಮಾಡಿದ್ದು, ಇದು ಜಾತ್ಯತೀತ ಸಂಸ್ಥೆಯಾಗಿದೆ. ಎಫ್ಡಿಸಿ, ಎಸ್ಡಿಸಿ, ಪಿಡಿಒ, ಇಂಜಿನಿಯರಿಂಗ್ ಮತ್ತು ಪೊಲೀಸ್, ಪಿಎಸ್ಐ ಇನ್ಸ್ಪೆಕ್ಟರ್ ಸೇರಿದಂತೆ ಸುಮಾರು 80 ಸಾವಿರ ಹುದ್ದೆಯ ಭರ್ತಿಗೆ ಸರ್ಕಾರ ಕ್ರಮಕೊಂಡಿದೆ. ಪದವಿ ಮುಗಿಯೋದು ಎಂದು ಸುಮ್ಮನೆ ಕುಳಿತುಕೊಳ್ಳಬೇಡಿ, ಓದುವ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು ಪಡೆದುಕೊಳ್ಳಿ ಎಂದರು.
ತುಮಕೂರಿನಲ್ಲಿ ನಮ್ಮ ಸಂಸ್ಥೆಯಿಂದ 150 ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ನಿಲಯ ಪ್ರಾರಂಭ ಮಾಡಿದ್ದು, ಹಾಸ್ಟೆಲ್ ಸೇರಿಕೊಳ್ಳುವ ಮಕ್ಕಳಿಗೆ ಉಳಿದ ಊಟ, ವಸತಿ ಕಲ್ಪಿಸಲಾಗಿದೆ, ಹಾಗಾಗಿ ಹೆಣ್ಣು ಗಂಡು ಎನ್ನದೆ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಸೇರಿಕೊಳ್ಳಬೇಕು. ಅದರಲ್ಲಿಯೂ ಬ್ಯಾಂಕಿಂಗ್ ಹುದ್ದೆಗೆ ಹಲವು ಅವಕಾಶಗಳಿವೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ತುಮಕೇರೆ ಗಿರೀಶ್, ಕಾರ್ಯದರ್ಶಿ ಎಚ್.ಜೆ.ಚನ್ನಪ್ಪ, ನಿರ್ದೇಶಕ ಎಂ.ಎನ್.ಶಿವಣ್ಣಗೌಡ, ನಿರ್ದೇಶಕರಾದ ಸೀತಾರಾಮಯ್ಯ, ಶಿವರಾಮಯ್ಯ, ಬಿಟ್ಟಸ್ವಾಮಿಗೌಡ, ನವೀನ್, ಕೆಎಸ್ಎಫ್ ಕಾರ್ಯದರ್ಶಿ ಎಚ್.ಎಸ್.ಹನುಮೇಗೌಡ, ಸಂಪನ್ಮೂಲ ವ್ಯಕ್ತಿ ಚೇತನ್ಕುಮಾರ್, ಕಾಲೇಜು ಪ್ರಾಚಾರ್ಯರಾದ ಗೋವಿಂದೇ ಗೌಡ, ರವೀಶ್ ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
