ತಿಪಟೂರು: ನಗರದ ಪ್ರಮುಖ ರಸ್ತೆಯಾದ ಬಿ.ಎಚ್. ರಸ್ತೆಯ ಕಲ್ಪತರು ಕಾಲೇಜಿನ ಮುಂಭಾಗದಲ್ಲಿ ಬೃಹತ್ ಗಾತ್ರದ ಮರವೊಂದು ಏಕಾಏಕಿ ಧರೆಗುರುಳಿದ ಪರಿಣಾಮ, ಸೂಗೂರು ಗ್ರಾಮದ ನಿವೃತ್ತ ಶಿಕ್ಷಕ ಶಿವಸ್ವಾಮಿ ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ರಸ್ತೆ ಬದಿಯಲ್ಲಿದ್ದ ಮರದ ಒಂದು ದೊಡ್ಡ ಕೊಂಬೆ ಮುರಿದು ರಸ್ತೆಗೆ ಬಿದ್ದಿದ್ದು, ಮತ್ತೊಂದು ಬೃಹತ್ ಕೊಂಬೆಯೂ ಸೀಳಿಕೊಂಡು ಯಾವುದೇ ಕ್ಷಣದಲ್ಲಾದರೂ ಉರುಳಿಬೀಳುವ ಅಪಾಯಕಾರಿ ಸ್ಥಿತಿಯಲ್ಲಿದೆ. ನಗರದ ಅತ್ಯಂತ ಜನನಿಬಿಡ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ತೀವ್ರ ಆತಂಕ ಮೂಡಿಸಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ನಗರಸಭೆ ಅಧಿಕಾರಿಗಳು ಹಾಗೂ ಬೆಸ್ಕಾಂ (BESCOM) ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿ ನಿಂತಿರುವ ಮರದ ಕೊಂಬೆಗಳನ್ನು ತೆರವುಗೊಳಿಸಲು ಹಾಗೂ ಸಂಚಾರ ಸುಗಮಗೊಳಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಮುಖ್ಯ ರಸ್ತೆಯಲ್ಲಿ ಇಂತಹ ದುರಂತ ನಡೆದಿರುವುದು ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ನಗರದ ವಿವಿಧೆಡೆ ಇರುವ ಅಪಾಯಕಾರಿ ಮರ ಹಾಗೂ ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸಬೇಕು, ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ತಲೆದಂಡಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
