ತುಮಕೂರು: ಮಹಾನಗರಪಾಲಿಕೆಗೆ ಸೇರಿದ ಇಡಿಎಸ್ ಎಂಟಿ ಬಡಾವಣೆಗೆ ಸಂಬಂಧಿಸಿದಂತೆ 9 ನಿವೇಶನಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಟ್ಟು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟ ಉಂಟು ಮಾಡಿದ ದೂರಿಗೆ ಸಂಬಂಧಿಸಿದಂತೆ ತುಮಕೂರು ಲೋಕಾಯುಕ್ತ ಪೊಲೀಸರು ಪಾಲಿಕೆ ಕಚೇರಿ ಹಾಗೂ ಅಧಿಕಾರಿಗಳ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ವಾರ್ಡ್ ನಂ 2–3ರ ನಿವೇಶನ ಸಂಖ್ಯೆ 589 ರಿಂದ 597ರವರೆಗಿನ 9 ನಿವೇಶನಗಳನ್ನು 2017ರಲ್ಲಿ ಪಾಲಿಕೆ ಸಿಬ್ಬಂದಿಗಳಾದ ಎಸ್ ಡಿಎ ಶ್ರೀನಿವಾಸಮೂರ್ತಿ, ಪ್ರಭಾರ ಕಂದಾಯ ನಿರೀಕ್ಷಕ ಶಂಕರಪ್ಪ, ಕಂದಾಯಾಧಿಕಾರಿ ರತ್ನಮ್ಮ, ಪ್ರಭಾರ ಉಪ ಆಯುಕ್ತ ತುಕಾರಾಂ ನಾಯಕ್ ಹಾಗೂ ಅಂದಿನ ಆಯುಕ್ತ ಮಂಜುನಾಥ್ ಅವರುಗಳು ಸೇರಿ 9 ನಿವೇಶನಗಳನ್ನು ಬ್ಲಾಕ್ ಮಾಡಿ ಯಾವುದೇ ದಾಖಲಾತಿ ಇಲ್ಲದಿದ್ದರೂ ಪಿಐಡಿಗಳನ್ನು ಬ್ಲಾಕ್ ಮಾಡಿ ಖಾಸಗಿ ವ್ಯಕ್ತಿಗಳಾದ ಟಿ.ದಾದಯ್ಯ ಹಾಗೂ ಅವರ ಇಬ್ಬರು ಮಕ್ಕಳ ಹೆಸರಿಗೆ ಹೊಸದಾಗಿ ಪಿಐಡಿ ನಂಬರ್ ಸೃಷ್ಟಿಸಿ ಅಕ್ರಮ ಖಾತೆ ಮಾಡಿಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಜಿ.ಮಂಜುನಾಥ್ ಅವರು ನೀಡಿದ ದೂರಿನನ್ನಾಧರಿಸಿ ಅ.14ರಂದು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್ ಎಂ., ಡಾ.ಸಂತೋಷ್ ಕೆ.ಎಂ. ಪೊಲೀಸ್ ನಿರೀಕ್ಷಕರುಗಳಾದ ನಿರ್ಮಲ ಎ., ರಾಜು ಟಿ., ರಾಘವೇಂದ್ರ ಜಿ.ಕೆ. ಹಾಗೂ ಸುನೀಲ್ ಕುಮಾರ್ ಹೆಚ್.ಎಸ್. ನೇತೃತ್ವದ ಸಿಬ್ಬಂದಿಯನ್ನೊಳಗೊಂಡ 6 ತಂಡ ದಾಳಿ ಕೈಗೊಂಡು ದಾಖಲೆ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
