ತುಮಕೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ-2026ರ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಜಿಲ್ಲೆಯ ಎಲ್ಲಾ ಮತದಾರರ ನೋಂದಣಾಧಿಕಾರಿಗಳು (ERO) ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು (AERO) ಈ ಸಭೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆಎಸ್-ವ್ಯಾನ್ (KSWAN) ಜಾಲತಾಣದ ಮೂಲಕ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿಗಳು ಭಾಗವಹಿಸಿ, ಜಿಲ್ಲೆಯಲ್ಲಿ ನಡೆಯುತ್ತಿರುವ SIR ಕಾರ್ಯದ ಪ್ರಗತಿ ಕುರಿತು ಸುದೀರ್ಘ ಚರ್ಚೆ ನಡೆಸಿದರು.
SIR ಪ್ರಕ್ರಿಯೆಯಡಿ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳು ಹಾಗೂ ನಮೂನೆ 6, 7 ಮತ್ತು 8ರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಯಾವುದೇ ವಿಳಂಬವಿಲ್ಲದೆ ತಕ್ಷಣ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಯಿತು.

ನಮೂನೆ-7ಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ, ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಬೇಕು. ವಿಚಾರಣೆಯ ನಂತರ ಸೂಕ್ತ ಕಾರಣಗಳನ್ನು ದಾಖಲಿಸಿ ‘ಸ್ಪೀಕಿಂಗ್ ಆರ್ಡರ್’ (Speaking Order) ಮೂಲಕ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಅರ್ಜಿಗಳಲ್ಲಿ ತಪ್ಪು ಹಾಗೂ ಸುಳ್ಳು ಮಾಹಿತಿ ನೀಡಿರುವುದು ಕಂಡುಬಂದಲ್ಲಿ, ಪ್ರಜಾಪ್ರತಿನಿಧಿ ಕಾಯ್ದೆ (Representation of the People Act) 1950ರ ಸೆಕ್ಷನ್ 31ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಯಿತು.
ಭಾರತ ಚುನಾವಣಾ ಆಯೋಗವು ದಿನಾಂಕ 01.10.2026ರಂದು ಹೊರಡಿಸಿರುವ ಪತ್ರದಂತೆ SIR ಪ್ರಕ್ರಿಯೆ ಪೂರ್ಣಗೊಂಡ ನಂತರ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಹಾಗೂ ಬಳಕೆ ಪ್ರಮಾಣಪತ್ರವನ್ನು (Utilization Certificate) ನಿಗದಿತ ಕಾಲಮಿತಿಯೊಳಗೆ ಸಲ್ಲಿಸಲು ನಿರ್ದೇಶಿಸಲಾಯಿತು.
ಚುನಾವಣಾ ಸಿದ್ಧತೆಗಳ ಭಾಗವಾಗಿ ದಿನಾಂಕ 14.10.2026ರಂದು ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ, SIR ಪ್ರಕ್ರಿಯೆ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ವಿವರಗಳನ್ನು ಒದಗಿಸಲಾಗಿದೆ.
ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ:
ಅಕ್ಟೋಬರ್ 23, 2026ರಂದು ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಚುನಾವಣೆ ನಡೆಯುವ ದಿನಾಂಕ: 23.10.2026
ಒಟ್ಟು ಮತದಾನ ಕೇಂದ್ರಗಳು: 80
ಒಟ್ಟು ಮತದಾರರ ಸಂಖ್ಯೆ: 50,060
ಚುನಾವಣೆಯನ್ನು ಸಂಪೂರ್ಣ ಪಾರದರ್ಶಕವಾಗಿ ಹಾಗೂ ಸುಸೂತ್ರವಾಗಿ ನಡೆಸಲು ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
