ಕುಣಿಗಲ್: ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿ ನಿರ್ಗತಿಕ ಸರ್ಕಾರವಾಗಿದೆ, ಸರ್ಕಾರ ಮುಜರಾಯಿ ಇಲಾಖೆಯ ದೇವಾಲಯಗಳ ಹುಂಡಿಗೆ ಕೈಹಾಕಿ ಆ ಹಣವನ್ನು ತುಮಕೂರು ದಸರಾ ಉತ್ಸವ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡುವ ಮೂಲಕ ಜಿಲ್ಲಾಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್, ಕೂಡಲೇ ಆದೇಶವನ್ನು ವಾಪಸ್ ಪಡೆಯಬೇಕೆಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಅವರು ಗುರುವಾರ ಪಟ್ಟಣದ ಜೆಡಿಎಸ್ ಕಚೇರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಕ್ತರು ದೇವಾಲಯದ ಅಭಿವೃದ್ಧಿಗೆ ಹಾಕಿರುವ ಹುಂಡಿ ಹಣದಲ್ಲಿ ತುಮಕೂರು ದಸರಾ ಉತ್ಸವ ಕಾರ್ಯಕ್ರಮ ಮಾಡುತ್ತಿರುವುದು ರಾಜ್ಯ ಸರ್ಕಾರ ದಿವಾಳಿ ಆಗಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಆರೋಪಿಸಿದರು.
ಆ. 11 ರಿಂದ 11 ದಿನಗಳ ಕಾಲ ನಡೆಯುತ್ತಿರುವ ದಸರಾ ಉತ್ಸವ ಹಾಗೂ ಪೂಜಾ ವಿಧಿ ವಿಧಾನಗಳು ನಡೆಯಲು, ಧಾರ್ಮಿಕ ಮಂಟಪದಲ್ಲಿ ಆಗಮೋಕ್ತರ ಕಾರ್ಯಕ್ರಮ ಹಾಗೂ ಆ. 21 ರಂದು ಧಾರ್ಮಿಕ ದತ್ತಿ ಇಲಾಖೆ ಸೇರಿದ ಪ್ರವರ್ಗ ‘ಸಿ’ ಅಧಿಸೂಚಿತ ಸಂಸ್ಥೆಯಾದ ತುಮಕೂರು ತಾಲೂಕು ಸೀತೆಕಲ್ಲು ಗ್ರಾಮದ ಶ್ರೀ ಚಾಮುಂಡೇಶ್ವರಿ (ಪಟ್ಟಾಲದಮ್ಮ) ದೇವರ ಉತ್ಸವ ಮೂರ್ತಿಯನ್ನು ಜಿಲ್ಲಾಡಳಿತ ವತಿಯಿಂದ ದಸರಾ ಮೆರವಣಿಗೆ ತಗಲುವ ವೆಚ್ಚವನ್ನು ಭರಿಸಲು ಜಿಲ್ಲೆಯ 9 ಪ್ರವರ್ಗ ‘ಎ’ ಹಾಗೂ ಪ್ರವರ್ಗ ‘ಬಿ’ ದೇವಾಲಯಗಳಿಂದ ಸುಮಾರು 49 ಲಕ್ಷ ರೂ. ವೆಚ್ಚ ಭರಿಸಲು ಅಧಿಕೃತ ಜ್ಞಾಪನಾ ಪತ್ರವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.
ಈ ನಿಟ್ಟಿನಲ್ಲಿ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯ ಐದು ಲಕ್ಷ, ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ನಾಲ್ಕು ಲಕ್ಷ, ಹುಲಿಯೂರುದುರ್ಗ ಹೋಬಳಿ ಹಳೇ ವೊರಮ್ಮ ದೇವಾಲಯಕ್ಕೆ ನಾಲ್ಕು ಲಕ್ಷ ಒದಗಿಸುವಂತೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಲಾಗಿದೆ. ಅದರಂತೆ ಈಗಾಗಲೇ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದಿಂದ ಐದು ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ದೇವಾಲಯಗಳ ಹುಂಡಿ ಹಣ ದೇವಾಲಯದ ಅಭಿವೃದ್ಧಿಗಲ್ಲದೇ ಬೇರೆ ಯಾವ ಉದ್ದೇಶಕ್ಕೆ ಹುಂಡಿ ಹಣ ಬಳಸಬಾರದೆಂದು ಸ್ಪಷ್ಟವಾಗಿ ಆದೇಶ ನೀಡಿದ್ದರು. ಆದರೆ ಆ ಆದೇಶವನ್ನು ಕಾಂಗ್ರೆಸ್ ಸರ್ಕಾರ ಉಲ್ಲಂಘನೆ ಮಾಡಿ ಹುಂಡಿ ಹಣಕ್ಕೆ ಕಣ್ಣು ಹಾಕುವ ಮೂಲಕ, ಹಿಂದೂ ದೇವಾಲಯಗಳನ್ನು ಗುರಿಯಾಗಿ ಇರಿಸಿಕೊಂಡು ಗದಾ ಪ್ರಹಾರ ಮಾಡುತ್ತಿದ್ದಾರೆ ಎಂದರು.
ಗೋಷ್ಟಿಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಕೆ.ಎಲ್. ಹರೀಶ್, ಸದಸ್ಯ ಶ್ರೀನಿವಾಸಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಎಡೆಯೂರು ದೀಪು, ಮಂಜುನಾಥ್, ಸದಸ್ಯ ತರಿಕೇರೆ ಪ್ರಕಾಶ್, ಮುಖಂಡ ರಂಗಸ್ವಾಮಿ ಇದ್ದರು.
ಕುಣಿಗಲ್ ಉತ್ಸವಕ್ಕೆ ಸರ್ಕಾರದ 50 ಲಕ್ಷ ರೂ.
ಕುಣಿಗಲ್ ನಲ್ಲಿ ನಡೆದ ಕುಣಿಗಲ್ ಉತ್ಸವ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಶಾಸಕ ಡಾ. ಎಚ್. ಡಿ. ರಂಗನಾಥ್ ಅವರು 50 ಲಕ್ಷ ರೂ. ಪಡೆದು ಕಾರ್ಯಕ್ರಮ ಮಾಡಿದ್ದಾರೆ. ಆದರೆ ಈ ಕಾರ್ಯಕ್ರಮವು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾಡಿದ್ದೇವೆ ಎಂದು ಜನರಿಗೆ ಸುಳ್ಳು ಹೇಳಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮುಂದಿನ ದಿನದಲ್ಲಿ ಕಾರ್ಯಕ್ರಮಕ್ಕೆ ಎಲ್ಲೆಲ್ಲಿ ಎಷ್ಟೆಷ್ಟು ಹಣ ವಸೂಲಿ ಮಾಡಲಾಗಿದೆ ಎಂಬುದರ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್ ಹೇಳಿದರು.
“ಒತ್ತಡಕ್ಕೆ ಜಿಲ್ಲಾಧಿಕಾರಿ ಮಣಿದು ದೇವಾಲಯಗಳ ಇಒಗಳಿಗೆ ಪತ್ರ ಬರೆದು ಹಣ ವಸೂಲಿ ಮಾಡಿ ದಸರಾ ಉತ್ಸವ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ರಾಜ್ಯದಲ್ಲಿ ಬರ ಇರುವ ವೇಳೆ ತುಮಕೂರಿನಲ್ಲಿ ದಸರಾ ಅಗತ್ಯವಿತ್ತೇ? ನಿಮ್ಮ ಉತ್ಸವಕ್ಕೆ ಭಕ್ತರ ಹಣ ಬೇಕಾಗಿತ್ತೇ? ಸರ್ಕಾರದ ಹಣದಲ್ಲಿ ಏಕೆ ದಸರಾ ಆಚರಣೆ ಮಾಡುತ್ತಿಲ್ಲ? ಸರ್ಕಾರ ಇಷ್ಟೊಂದು ದುಸ್ಥಿತಿಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.”
— ಬಿ.ಎನ್.ಜಗದೀಶ್, ತಾಲೂಕು ಜೆಡಿಎಸ್ ಅಧ್ಯಕ್ಷರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
