ರಾಜ್ಯದಲ್ಲಿ ಪಡಿತರ ಚೀಟಿ (ರೇಷನ್ ಕಾರ್ಡ್) ಇ–ಕೆವೈಸಿ ಮಾಡಿಸಿಕೊಳ್ಳಲು ಪರದಾಡುತ್ತಿದ್ದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ಮತ್ತೆ ವಿಸ್ತರಿಸಲಾಗಿದ್ದು, ಇದೀಗ ನವೆಂಬರ್ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಅಕ್ಟೋಬರ್ 20 ಕೊನೆಯ ದಿನಾಂಕವಾಗಿತ್ತು.
ರಾಜ್ಯದ ವಿವಿಧೆಡೆ ನ್ಯಾಯಬೆಲೆ ಅಂಗಡಿಗಳ ಮುಂದೆ ಇ-ಕೆವೈಸಿ ಮಾಡಿಸಲು ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆ ಪರಿಹರಿಸಲು ಸರ್ಕಾರ ‘ಅನ್ನಸೇವೆ’ ಮೊಬೈಲ್ ಆ್ಯಪ್ ಪರಿಚಯಿಸಿತ್ತು. ಆದರೆ, ಆ್ಯಪ್ನಲ್ಲಿನ ತಾಂತ್ರಿಕ ಲೋಪದೋಷಗಳಿಂದಾಗಿ ಕೆಲವರಿಗೆ ಇ-ಕೆವೈಸಿ ಪೂರ್ಣಗೊಳಿಸಲು ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಗಡುವನ್ನು ವಿಸ್ತರಿಸಿದೆ.
ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸೂಚನೆಯಂತೆ, ಒಂದು ವರ್ಷಕ್ಕೂ ಹಿಂದೆ ಇ-ಕೆವೈಸಿ ಮಾಡಿಸಿರುವ 1,15,87,298 ಫಲಾನುಭವಿಗಳು ಮತ್ತೊಮ್ಮೆ ದೃಢೀಕರಣ ಮಾಡಿಸಿಕೊಳ್ಳಬೇಕಿದೆ.
ಇದರ ಜತೆಗೆ ಈವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 3,82,362 ಫಲಾನುಭವಿಗಳು ಹಾಗೂ ಐದು ವರ್ಷಗಳಿಗಿಂತ ಹಿಂದೆ ಇ-ಕೆವೈಸಿ ಮಾಡಿಸಿರುವ 54,27,396 ಫಲಾನುಭವಿಗಳು ಕೂಡ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
ಈ ಎಲ್ಲ ಫಲಾನುಭವಿಗಳು ನವೆಂಬರ್ 10ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ. ನಿಗದಿತ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪಡಿತರ ಚೀಟಿದಾರರು ‘ಅನ್ನಸೇವೆ’ ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆ್ಯಪ್ ಮೂಲಕ ಮಾಡಿಕೊಳ್ಳಲು ಸಾಧ್ಯವಾಗದವರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ ‘AHARA’ ತಂತ್ರಾಂಶದ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ಇದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಜನದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ, ಇ-ಕೆವೈಸಿ ಮಾಡಿಸುವ ಮೊದಲು ಆ್ಯಪ್ನ ನವೀಕೃತ ಆವೃತ್ತಿಯನ್ನು ಬಳಸುವುದು ಉತ್ತಮ.
ಉದ್ಯೋಗ ಅಥವಾ ಇತರ ಕಾರಣಗಳಿಂದ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ತೆರಳಿರುವ ಪಡಿತರ ಚೀಟಿದಾರರಿಗೂ ಸರ್ಕಾರ ಅನುಕೂಲ ಕಲ್ಪಿಸಿದೆ. ‘ಅನ್ನಸೇವೆ’ ಆ್ಯಪ್ನ ಲಭ್ಯತೆಯನ್ನು ದೇಶಾದ್ಯಂತ ವಿಸ್ತರಿಸಲಾಗಿದ್ದು, ಹೊರರಾಜ್ಯಗಳಲ್ಲಿರುವ ಫಲಾನುಭವಿಗಳು ತಾವು ಇರುವ ಸ್ಥಳದಿಂದಲೇ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಇ-ಕೆವೈಸಿ ಪೂರ್ಣಗೊಳಿಸಬಹುದು.ಈಗಾಗಲೇ ಆ್ಯಪ್ ಬಳಸುತ್ತಿರುವವರು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ನವೀಕರಣವನ್ನು ಪರಿಶೀಲಿಸಿ, ಅಗತ್ಯವಿದ್ದರೆ ಅಪ್ಡೇಟ್ ಮಾಡಿಕೊಳ್ಳಬಹುದು.ಹೀಗಾಗಿ ಪಡಿತರ ಚೀಟಿದಾರರು ಕೊನೆಯ ಕ್ಷಣದವರೆಗೆ ಕಾಯದೆ, ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿ ನವೆಂಬರ್ 10ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದು ಸೂಕ್ತ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
