ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್ (ರಿ.) ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ನೂತನವಾಗಿ ಸ್ಥಾಪಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್‌ನ ನಾಮಫಲಕವನ್ನು ಉದ್ಘಾಟಿಸಲಾಯಿತು.
ಜಯಂತೋತ್ಸವದ ಅಂಗವಾಗಿ ವಾಲ್ಮೀಕಿ ಸಮಾಜದ ಮಹಿಳೆಯರು ಕುಂಭ–ಕಳಶಗಳನ್ನು ಹೊತ್ತು, ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಹೋರಿ ಮತ್ತು ಟಗರುಗಳು ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆದವು. ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.
ಗ್ರಾಮದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ಜಯಂತೋತ್ಸವದ ಮೂಲಕ ಶ್ರೀ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು, ಜೀವನ ಮೌಲ್ಯಗಳು ಹಾಗೂ ರಾಮಾಯಣದ ಸಂದೇಶಗಳನ್ನು ಸ್ಮರಿಸಲಾಯಿತು. ಸಮಾಜದ ಸಂಘಟನೆ, ಯುವಕರ ಅಭಿವೃದ್ಧಿ, ಶಿಕ್ಷಣಕ್ಕೆ ಉತ್ತೇಜನ, ಮಹಿಳಾ ಸಬಲೀಕರಣ, ಸಮಾನತೆ ಮತ್ತು ಸಾರ್ವಜನಿಕ ಸೇವೆಯ ಉದ್ದೇಶದಿಂದ ನೂತನ ಟ್ರಸ್ಟ್‌ಗೆ ಚಾಲನೆ ನೀಡಲಾಯಿತು. ಎಲ್ಲ ವರ್ಗದ ಜನರನ್ನು ಒಳಗೊಂಡು ಗ್ರಾಮದಲ್ಲಿ ಸ್ವಚ್ಛತೆ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.
ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹುಲಿರಾಮಯ್ಯ ಮಾತನಾಡಿ, ಗ್ರಾಮದಲ್ಲಿ ಪ್ರಥಮ ಬಾರಿಗೆ ಗ್ರಾಮಸ್ಥರು ಹಾಗೂ ವಾಲ್ಮೀಕಿ ಸಮಾಜದ ಬಂಧುಗಳು ಒಗ್ಗೂಡಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವೈಭವದಿಂದ ಆಚರಿಸುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಜನ ಪ್ರತಿನಿಧಿಗಳು ಗ್ರಾಮ ಹಾಗೂ ಟ್ರಸ್ಟ್‌ನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯು ಟ್ರಸ್ಟ್‌ನ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ, ಯುವಕರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದರು. ಜೊತೆಗೆ, ಸಮಾಜದ ಹಿಂದುಳಿದ ಕುಟುಂಬಗಳು, ಮಹಿಳೆಯರು ಹಾಗೂ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ಸಾಮೂಹಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ಟ್ರಸ್ಟ್ ನ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಕಾಂತರಾಜ್ ಮಾತನಾಡಿ, ಮರೇನಾಯಕನಹಳ್ಳಿ ಗ್ರಾಮದಲ್ಲಿ ಪ್ರಥಮ ಬಾರಿಗೆ ವಾಲ್ಮೀಕಿ ಜಯಂತೋತ್ಸವ ಆಚರಿಸುವುದರೊಂದಿಗೆ ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್‌ನ್ನು ಉದ್ಘಾಟಿಸಿ ನಾಮಫಲಕ ಅನಾವರಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಯುವಕರ ಪ್ರಗತಿಗಾಗಿ ಟ್ರಸ್ಟ್ ಶ್ರಮಿಸಲಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಮಾನತೆಯ ಕ್ಷೇತ್ರಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಸಮಾಜದ ಮುಖಂಡರು ಮತ್ತು ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ಮಂಜುನಾಥ್ ಎಂ.ಎನ್., ಉಪಾಧ್ಯಕ್ಷ ರಂಗಧಾಮಯ್ಯ, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಮನೋಜ್, ಸಹಕಾರ್ಯದರ್ಶಿ ರಾಕೇಶ್, ನಿರ್ದೇಶಕರಾದ ಕಾಂತರಾಜ್, ರಂಗರಾಜ್, ಪ್ರದೀಪ್, ಸುಪ್ರೀತ್, ರಂಜಿತ್, ಕಾಮರಾಜ್, ಮಾರುತಿ, ನಂದನ್, ಅನಿಲ್ ಕುಮಾರ್, ಜೈಕುಮಾರ್ ಹಾಗೂ ಲೋಕೇಶ್ ಸೇರಿದಂತೆ ಹಿರಿಯ ಮುಖಂಡರಾದ ಕಾಮಣ್ಣ, ಮುದ್ದರಂಗಪ್ಪ, ದೊಡ್ಡಯ್ಯ, ಚಂದ್ರಯ್ಯ, ನಂಜಪ್ಪ, ಪರಮೇಶ್, ಮಂಜುನಾಥ್, ಶಿವರಾಜ್, ಬೊಮ್ಮಲಿಂಗಯ್ಯ ಮತ್ತು ಲಕ್ಷ್ಮಯ್ಯ ಉಪಸ್ಥಿತರಿದ್ದರು. ಗ್ರಾಮದ ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
