ಪಾವಗಡ: ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಲೋಕೇಶ್ ಪಾಳೇಗಾರ್ ಮಾತನಾಡಿ, ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹೆಚ್ಚಿಸುವ ಕುರಿತು ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಆದರೆ, ಮೀಸಲಾತಿ ಹೆಚ್ಚಳದ ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕರು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಮೀಸಲಾತಿ ವಿಚಾರದಲ್ಲಿ ಹಿನ್ನಡೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಹಾಗೂ ಈ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಕೆ.ರಾಮ್ಮುಂ ಆನಂದ್ ಮಾತನಾಡಿ, ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೀಸಲಾತಿ ನೀತಿಯನ್ನು ಖಂಡಿಸಿ, ಸಮುದಾಯದ ಮುಖಂಡರು ಹಾಗೂ ಸದಸ್ಯರು ಕಪ್ಪು ಪಟ್ಟಿ ಧರಿಸಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕ್ರೀಡಾಪಟು ರಾಜಲಕ್ಷ್ಮಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ಕರ್ನಾಟಕ ರಾಜ್ಯ ಥ್ರೋ ಬಾಲ್ ತಂಡವನ್ನು ಪ್ರತಿನಿಧಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಾವಗಡ ತಾಲೂಕು ಮತ್ತು ಸಮುದಾಯಕ್ಕೆ ಕೀರ್ತಿ ತಂದ ರಾಜಲಕ್ಷ್ಮಿ ಜಿ.ಎಂ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಪ ತಹಸೀಲ್ದಾರ್ ಚಂದ್ರಶೇಖರ್, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸುರೇಶ್, ಗ್ರಾಮೀಣ ವೃತ್ತ ನಿರೀಕ್ಷಕ ಕೊಟ್ಟೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಯತೀಶ್, ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್, ಬಿಇಒ ಇಂದ್ರಾಣಮ್ಮ, ಬಿಸಿಯೂಟ ವೀಕ್ಷಣಾಧಿಕಾರಿ ಕುಮಾರ್, ಅಬಕಾರಿ ಇಲಾಖೆಯ ಮೈಕಲ್, ಮಾರುತಿ ಪ್ರಸಾದ್, ರಾಮಾಂಜನೇಯ, ಕಸಬಾ ಆರ್ಐ ರಾಜಗೋಪಾಲ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ರಾಜೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಾಲ್ಮೀಕಿ ದೇವಸ್ಥಾನದಲ್ಲಿ ವಿಶೇಷ ಪೂಜೆ:
ತಹಸೀಲ್ದಾರ್ ಕಚೇರಿ ಆವರಣದಲ್ಲಿ ಜಯಂತಿ ಆಚರಿಸುವುದಕ್ಕೂ ಮುನ್ನ ಪಟ್ಟಣದ ಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ತಾಲೂಕು ಆಡಳಿತ ಹಾಗೂ ಸಮುದಾಯದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೂರ್ಯ, ಚಂದ್ರ ಇರುವ ವರೆಗೂ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಭೂಮಿಯ ಮೇಲೆ ಶಾಶ್ವತವಾಗಿ ಉಳಿಯಲಿದೆ. ಮಹರ್ಷಿಯವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಮಹಾನ್ ತತ್ವಜ್ಞಾನಿ ಹಾಗೂ ಸಮಾಜ ಸುಧಾಕರರಾಗಿದ್ದು, ಅವರ ಆದರ್ಶಗಳು ಸಮಾಜಕ್ಕೆ ಸದಾ ಮಾರ್ಗ ದರ್ಶನ ನೀಡುತ್ತದೆ.
— ಮಾರಪ್ಪ, ನಿವೃತ್ತ ಪ್ರಾಂಶುಪಾಲರು.
ಸಮುದಾಯದ ಮುಖಂಡರಾದ ವಾಲ್ಮೀಕಿ ಯುವಕ ಸಂಘದ ಗೌರವಾಧ್ಯಕ್ಷ ಮೂರ್ತಿ, ಸಂಘದ ಅಧ್ಯಕ್ಷ ಹಾಗೂ ವಕೀಲ ನರಸಿಂಹ ಕೃಷ್ಣ, ಗುಟ್ಟಳ್ಳಿ ಅಂಡಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಹನುಮಂತ ರಾಯಪ್ಪ, ಆದರ್ಶ ಶಾಲೆಯ ಮಾಜಿ ಅಧ್ಯಕ್ಷ ಪ್ರಕಾಶ್ ನಾಯಕ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ರಾಜಶೇಖರಪ್ಪ, ದ್ರಾಕ್ಷಿ ತೋಟದ ಒಬಯ್ಯ, ಅಂಬಿಕಾ ರಮೇಶ್, ರಂಗಮ್ಮ, ಶಿವಕುಮಾರ್, ವಕೀಲ ರಾಜಣ್ಣ, ಹನುಮಂತ ರಾಯಪ್ಪ, ಬ್ಯಾಡನೂರು ಶಿವು, ಭಾಸ್ಕರ್ ನಾಯಕ್, ತಿಮ್ಮಯ್ಯ, ಹರ್ಷ, ಈರಣ್ಣ, ಮಂಜುನಾಥ್ ಪಾಳೇಗಾರ್, ಮಲ್ಲಿಕಾರ್ಜುನ್, ಸೂರ್ಯಪ್ರಕಾಶ್ ಹಾಗೂ ಮಾರುತಿ ಎಂ.ಎಸ್. ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
