ತುಮಕೂರು : ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ‘ತುಮಕೂರು ಸ್ಕ್ವೇರ್’ ಎಂದು ಮರುನಾಮಕರಣ ಮಾಡುವ ಜಿಲ್ಲಾಡಳಿತದ ನಿರ್ಧಾರದ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದ ಟಿಎಂ ಫಸ್ಟ್ ನ್ಯೂಸ್ ಡಿಜಿಟಲ್ ಮಾಧ್ಯಮದ ಸಂಪಾದಕ ಪಿ.ಎನ್. ಮಂಜುನಾಥ್ ಗೌಡ ಅವರಿಗೆ ಪೊಲೀಸ್ ಇಲಾಖೆ ನೀಡಿರುವ ನೋಟಿಸ್ ಹಿಂಪಡೆಯುವಂತೆ ಆಗ್ರಹಿಸಿ, ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರತಿನಿಧಿಗಳು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಸಾರ್ವಜನಿಕ ವಿಚಾರಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸುವುದು ಮಾಧ್ಯಮಗಳ ಪ್ರಮುಖ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ತಿಳಿಯುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದ ಪತ್ರಕರ್ತ ಮಂಜುನಾಥ್ ಗೌಡ ಅವರಿಗೆ ನೋಟಿಸ್ ನೀಡಿರುವ ಕುರಿತು ಸಂಘಟನೆಗಳ ಪ್ರತಿನಿಧಿಗಳು ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆದರು. ಅಲ್ಲದೆ, ನೋಟಿಸ್ ಹಿಂಪಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಪ್ರತಿಕ್ರಿಯಿಸಿ, ಪತ್ರಕರ್ತರು ಮತ್ತು ಪೊಲೀಸರು ಸಾರ್ವಜನಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಸನ್ನಿವೇಶಗಳು ಎದುರಾಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ವಿಷಯದ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ಹಿಂಪಡೆಯುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಸಿ. ಕರುಣಾಕರ್, ಜಂಟಿ ಕಾರ್ಯದರ್ಶಿ ಸಿ. ರಂಗನಾಥ್, ಜಿಲ್ಲಾ ಉಪಾಧ್ಯಕ್ಷ ಪಿ.ಎಸ್. ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್. ಮಂಜುನಾಥ್ ಗೌಡ, ಸಂಘಟನಾ ಕಾರ್ಯದರ್ಶಿ ಸಿ.ಎನ್. ಮಹೇಶ್ ಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಚಿ.ನಿ. ಪುರುಷೋತ್ತಮ್, ಜಿಲ್ಲಾಧ್ಯಕ್ಷ ಎಲ್. ಯೋಗೀಶ್, ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್, ಉಪಾಧ್ಯಕ್ಷ ಜಯಣ್ಣ, ಜಯಣ್ಣ ಬೆಳೆಗೆರೆ, ಜಗನ್ನಾಥ ಕಾಳೇನಹಳ್ಳಿ, ಎಸ್ಸಿ-ಎಸ್ಟಿ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ಪರಮೇಶ್, ಶ್ರೀಹರ್ಷ, ಕುಚ್ಚಂಗಿ ಪ್ರಸನ್ನ, ವಾಗೀಶ್, ಹರೀಶ್ ಆಚಾರ್ಯ, ಸಂತೋಷ್ ಎಂ.ಕೆ., ಗಜೇಂದ್ರ, ಸಿ.ಎಚ್. ರವಿಕುಮಾರ್, ಗೂಳೂರು ಸುರೇಶ್, ಸಿದ್ದರಾಮು ಹೆಬ್ಬಾಕ, ಹರೀಶ್, ಸುರೇಶ್ ವತ್ಸ, ಮಂಜುನಾಥ ತಾಳಮಕ್ಕಿ, ರಾಕೇಶ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
