ಮಧುಗಿರಿ: ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಸಮೀಪ ಹೊಸದಾಗಿ ಬಾರ್ ತೆರೆಯಲು ಅನುಮತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಭೀಮ್ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷ ನಟರಾಜ್ ಮೌರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಧುಗಿರಿ ಪಟ್ಟಣದ ಪ್ರಾಚೀನ ಹಾಗೂ ಪುರಾತತ್ವ ಮಹತ್ವ ಹೊಂದಿರುವ ಕಲ್ಯಾಣಿ ಸಮೀಪ ಈಗಾಗಲೇ ಗಂಧರ್ವ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿದೆ. ಇದರ ಪಕ್ಕದಲ್ಲಿಯೇ ಮತ್ತೊಂದು ಬಾರ್ ತೆರೆಯಲು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅನುಮತಿ ನೀಡಬಾರದೆಂದು ನಟರಾಜ್ ಮೌರ್ಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಳತೆ ಕಾರ್ಯ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೊಸ ಬಾರ್ ತೆರೆಯಲು ಉದ್ದೇಶಿಸಿರುವ ಸ್ಥಳದ ಸುತ್ತಮುತ್ತ ಪ್ರಾಚೀನ ಕಲ್ಯಾಣಿ, ಮುಸ್ಲಿಂ ಸಮುದಾಯದ ಗೋರಿ, ಉಪ ವಿಭಾಗಾಧಿಕಾರಿಗಳ ಕಚೇರಿ, ಪಶುಪಾಲನಾ ಇಲಾಖೆ ಕಚೇರಿ, ಇಂದಿರಾ ಕ್ಯಾಂಟೀನ್ ಹಾಗೂ ಖಾಸಗಿ ಬಸ್ ನಿಲ್ದಾಣಗಳಿವೆ. ಅಲ್ಲದೆ, ವಿಶ್ವವಿಖ್ಯಾತ ಏಕಶಿಲಾ ಬೆಟ್ಟ ವೀಕ್ಷಿಸಲು ತೆರಳುವ ಪ್ರವಾಸಿಗರು ಬಳಸುವ ಕೋಟೆಯ ಮುಖ್ಯ ದ್ವಾರವೂ ಸಮೀಪದಲ್ಲಿದೆ.
ಇಂತಹ ಸ್ಥಳದಲ್ಲಿ ಮತ್ತೊಂದು ಮದ್ಯದಂಗಡಿ ಆರಂಭಿಸುವುದು ಸೂಕ್ತವಲ್ಲ ಎಂಬುದು ಭೀಮ್ ಆರ್ಮಿ ಸಂಘಟನೆಯ ಆಕ್ಷೇಪವಾಗಿದೆ. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ಹೊಸ ಬಾರ್ಗೆ ಅನುಮತಿ ನೀಡಬಾರದು ಎಂದು ಸಂಘಟನೆ ಒತ್ತಾಯಿಸಿದೆ.
ಶಾಸಕ ಕೆ.ಎನ್. ರಾಜಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ಮಧುಗಿರಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪಟ್ಟಣದಲ್ಲಿ ಮತ್ತೊಂದು ಬಾರ್ ತೆರೆಯಲು ಪ್ರಯತ್ನ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
“ಪ್ರಾಚೀನ ಹಾಗೂ ಐತಿಹಾಸಿಕ ಸ್ಥಳಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಮಹತ್ವದ ಸ್ಥಳದ ಸಮೀಪ ಹೊಸ ಬಾರ್ ಪ್ರಾರಂಭಿಸಲು ಅವಕಾಶ ನೀಡಬಾರದು. ಈ ಸಂಬಂಧ ಅಬಕಾರಿ ಇಲಾಖೆಗೆ ದೂರು ಸಲ್ಲಿಸಿದ್ದೇನೆ. ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯಬಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ.”
— ನಟರಾಜ್ ಮೌರ್ಯ
ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಉದ್ಯೋಗ ಸೃಷ್ಟಿ ಅಗತ್ಯವಿರುವಾಗ, ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸುವುದಕ್ಕಿಂತ ಸಾರ್ವಜನಿಕ ಹಿತಾಸಕ್ತಿ ಮತ್ತು ಐತಿಹಾಸಿಕ ಸ್ಥಳಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
