ತುಮಕೂರು: ಭಾಷೆ ಎನ್ನುವುದು ಕೇವಲ ಸಂವಹನದ ಸಾಧನವಲ್ಲ. ಸಂಗೀತ, ಭಾವನೆ, ಕೋಪ, ಕಾಮ, ಮದ ಸೇರಿದಂತೆ ಮನುಷ್ಯನ ವಿವಿಧ ಭಾವನೆಗಳನ್ನು ಪದಗಳ ಮೂಲಕ ಅಭಿವ್ಯಕ್ತಿಸುವ ಅದ್ಭುತ ಮಾಧ್ಯಮವಾಗಿದೆ. ಸಪ್ತಸ್ವರಗಳನ್ನು ಒಳಗೊಂಡು ಅಭಿನಯಿಸುವ ಹಾಗೂ ಬಿರುಗಾಳಿಯ ಅಬ್ಬರವನ್ನೂ ಶಬ್ದಗಳ ಮೂಲಕ ಕಟ್ಟಿಕೊಡುವ ಶಕ್ತಿ ಕನ್ನಡ ಭಾಷೆಗಿದೆ ಎಂದು ಖ್ಯಾತ ವಾಗ್ಮಿ ಪ್ರೊ. ಎಂ. ಕೃಷ್ಣಗೌಡ ಹೇಳಿದರು.
ತುಮಕೂರು ವಿಶ್ವ ವಿದ್ಯಾ ನಿಲಯದ ಡಾ. ಡಿ.ವಿ.ಜಿ. ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಅ. 28ರಂದು ಆಯೋಜಿಸಿದ್ದ ನಾಡೋಜ ಪ್ರೊ. ಕಮಲಾ ಹಂಪನಾ ದತ್ತಿ ಉಪನ್ಯಾಸ ಹಾಗೂ ಕನ್ನಡ ಕಾವ್ಯಭಾಷೆ ಕುರಿತ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ನಾದ ಮತ್ತು ಅರ್ಥದ ಸೊಗಸಿನ ಜತೆಗೆ ಅಭಿನಯಿಸುವ ಸಾಮರ್ಥ್ಯವೂ ಇದೆ. ಬದುಕಿನ ಅನುಭವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲು ಕನ್ನಡ ಸಮರ್ಥ ಭಾಷೆಯಾಗಿದೆ. ಭಾಷೆಯ ನೈಜ ಶಕ್ತಿಯ ಅರಿವು ಮೂಡಬೇಕಾದರೆ ನಿರಂತರವಾಗಿ ಬರೆಯಬೇಕು, ಓದಬೇಕು ಮತ್ತು ಮಾತನಾಡಬೇಕು. ಎಲ್ಲ ಕ್ಷೇತ್ರಗಳಲ್ಲೂ ವಿಕಾಸ ನಡೆಯುವಂತೆ ಕನ್ನಡ ಭಾಷೆಯಲ್ಲಿಯೂ ನಿರಂತರ ಬೆಳವಣಿಗೆಯಾಗುತ್ತಿದೆ ಎಂದು ತಿಳಿಸಿದರು.
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ನಾಡಿನ ಕಲೆ, ಸಂಸ್ಕೃತಿ, ಆಚರಣೆಗಳು, ವಿಚಾರಧಾರೆಗಳು ಹಾಗೂ ಗೆಲುವು-ಸೋಲು ಸೇರಿದಂತೆ ಬದುಕಿನ ವಿವಿಧ ಆಯಾಮಗಳನ್ನು ದಾಖಲಿಸಿದೆ. ಕನ್ನಡದ ಸಾಹಿತ್ಯಕ ಶ್ರೀಮಂತಿಕೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ ಮಾತನಾಡಿ, ಕಮಲಾ ಹಂಪನಾ ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಜಿ.ಎಸ್. ಶಿವರುದ್ರಪ್ಪ ಅವರು ಕರ್ನಾಟಕದ ಮೂರನೇ ರಾಷ್ಟ್ರಕವಿಯಾಗುವಲ್ಲಿ ಕಮಲಾ ಹಂಪನಾ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಸ್ಮರಿಸಿದರು.
ಕರ್ನಾಟಕದ ಹಲವು ಆಯ್ಕೆ ಸಮಿತಿಗಳು ಅವರ ಸಲಹೆಗಳನ್ನು ಪಡೆಯುತ್ತಿದ್ದವು. ಅವರ ಅಭಿಪ್ರಾಯಗಳಿಗೆ ಸರ್ಕಾರ ಮನ್ನಣೆ ನೀಡುತ್ತಿದ್ದುದೇ ಅವರ ಸಾಹಿತ್ಯ ಜ್ಞಾನ, ದೂರದೃಷ್ಟಿ ಮತ್ತು ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದು ತಮ್ಮ ಪತ್ನಿ ಕಮಲಾ ಹಂಪನಾ ಅವರೊಂದಿಗಿನ ಒಡನಾಟ ಹಾಗೂ ಅವರ ಸಾಧನೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ್ ಎಚ್.ಎಸ್., ಕಲಾ ನಿಕಾಯದ ಡೀನ್ ಪ್ರೊ. ಪರಶುರಾಮ್ ಕೆ.ಜಿ., ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ. ಅಣ್ಣಮ್ಮ ಹಾಗೂ ಕಾರ್ಯಕ್ರಮದ ಸಂಯೋಜಕಿ ಪ್ರೊ. ಗೀತಾ ವಸಂತ ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
