ಕೊರಟಗೆರೆ : ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ₹1.30 ಕೋಟಿ ವೆಚ್ಚದಲ್ಲಿ ಐತಿಹಾಸಿಕ ಶೈಲಿಯ ಭವ್ಯ ರಾಜಗೋಪುರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.
ದೇವಸ್ಥಾನದ ಧಾರ್ಮಿಕ ವೈಭವವನ್ನು ಹೆಚ್ಚಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ರಾಜಗೋಪುರ ನಿರ್ಮಾಣದ ದ್ವಾರಬಾಗಿಲು ಪೂಜೆಯನ್ನು ತಹಸೀಲ್ದಾರ್ ಶರತ್ಕುಮಾರ್ ಹಾಗೂ ದೇವಸ್ಥಾನದ ಅಭಿವೃದ್ಧಿ ಮಂಡಳಿ ವತಿಯಿಂದ ನೆರವೇರಿಸಲಾಯಿತು.
ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ವಿ. ರಾಮಮೂರ್ತಿ ಮಾತನಾಡಿ, ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಈ ಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದು, ಕ್ಷೇತ್ರದ ಧಾರ್ಮಿಕ ಪರಂಪರೆಯನ್ನು ಉಳಿಸಿ ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ₹1.30 ಕೋಟಿ ವೆಚ್ಚದಲ್ಲಿ ರಾಜಗೋಪುರ ನಿರ್ಮಿಸಲು ಸಂಕಲ್ಪಿಸಲಾಗಿದೆ. ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಿವಾಸ್ ಅವರು ₹1 ಲಕ್ಷ ದೇಣಿಗೆ ನೀಡಿದ್ದಾರೆ. ಇನ್ನಷ್ಟು ಭಕ್ತರು ದೇಣಿಗೆ ನೀಡಿ ಪುಣ್ಯ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್ ಮಾತನಾಡಿ, ಕ್ಯಾಮೇನಹಳ್ಳಿ ಕ್ಷೇತ್ರದಲ್ಲಿ ರಾಜಗೋಪುರ ನಿರ್ಮಾಣವಾಗುತ್ತಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ದಾನಿಗಳು ತನು, ಮನ, ಧನದಿಂದ ಸಹಕರಿಸಬೇಕು. ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ್ ಅವರು ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯ ಎಲ್. ರಾಜಣ್ಣ ಮಾತನಾಡಿ, ರಾಜಗೋಪುರ ನಿರ್ಮಾಣಕ್ಕೆ ಭಕ್ತರು ಉತ್ತಮ ಸ್ಪಂದನೆ ನೀಡಿದ್ದು, ಈಗಾಗಲೇ ₹30 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹವಾಗಿದೆ. ದೇವಸ್ಥಾನದ ಅಭಿವೃದ್ಧಿ, ಮೂಲ ಸೌಕರ್ಯಗಳ ಸುಧಾರಣೆ ಹಾಗೂ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜಗೋಪುರ ನಿರ್ಮಾಣ ಮಹತ್ವದ ಪಾತ್ರ ವಹಿಸಲಿದೆ. ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಇನ್ನೂ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದ್ದು, ಭಕ್ತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
ಸಮಿತಿ ಸದಸ್ಯ ಹೊಳವನಹಳ್ಳಿ ಜಯರಾಮು ಮಾತನಾಡಿ, ಧಾರ್ಮಿಕ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಭಕ್ತಿಯ ಮೌಲ್ಯಗಳನ್ನು ಪರಿಚಯಿಸುವ ಕಾರ್ಯ ಇದಾಗಿದೆ. ಆಂಜನೇಯ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಳ್ಳುವುದು ಸಂತೋಷದ ಸಂಗತಿಯಾಗಿದ್ದು, ಈ ಪುಣ್ಯಕಾರ್ಯಕ್ಕೆ ಇನ್ನಷ್ಟು ಭಕ್ತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶರತ್ಕುಮಾರ್, ಆರ್ಐ ಪ್ರತಾಪ್, ಸಲ್ಮಾನ್, ಮುಖಂಡರಾದ ಟಿ.ಸಿ. ರಾಮಯ್ಯ, ಉಮಾಶಂಕರ್, ರಂಗನಾಥ್, ವೆಂಕಟೇಶ್, ಕಾಳಿಚರಣ್, ಶ್ರೀನಿವಾಸ್, ಚಂದ್ರಣ್ಣ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ಡಾ. ಜಿ. ಪರಮೇಶ್ವರ್ ಆರೋಗ್ಯ ಚೇತರಿಕೆಗೆ ವಿಶೇಷ ಪೂಜೆ
ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪೂಜೆಯಲ್ಲಿ ಪಾಲ್ಗೊಂಡು, ಡಾ. ಜಿ. ಪರಮೇಶ್ವರ್ ಅವರು ಶೀಘ್ರ ಸಂಪೂರ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
