ಪಾವಗಡ: ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಭಾಗ ಗುರುವಾರ ರಾತ್ರಿ ಸುಮಾರು 7.30ರ ವೇಳೆಗೆ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲೂಕಿನ ಕರಿಯಮ್ಮನಪಾಳ್ಯದ ನಾಗರಾಜು (32) ಮತ್ತು ಹರೀಶ್ ಅವರು ಒಂದು ದ್ವಿಚಕ್ರ ವಾಹನದಲ್ಲಿ ಎರಡು ಸಿಮೆಂಟ್ ಮೂಟೆಗಳನ್ನು ಸಾಗಿಸಿಕೊಂಡು ಕೆ.ಟಿ.ಹಳ್ಳಿ ಕಡೆಯಿಂದ ತಮ್ಮೂರಿಗೆ ತೆರಳುತ್ತಿದ್ದರು.
ಇದೇ ವೇಳೆ ಬೆಳ್ಳಿಬಟ್ಲು–ದೇವಲಕೆರೆ ಕಡೆಯಿಂದ ಶ್ರೀಧರ್ ಮತ್ತು ಸಂದೀಪ್ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಕೆ.ಟಿ.ಹಳ್ಳಿ ಕಡೆಗೆ ಬರುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಮುಂಭಾಗ ಎರಡೂ ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ.
ಡಿಕ್ಕಿಯ ತೀವ್ರತೆಗೆ ವಾಹನ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದು, ಸಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಾಗರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಬ್ಬರು ಮಕ್ಕಳನ್ನು ಅಗಲಿದ ತಂದೆ
ನಾಗರಾಜು ಅವರ ಅಕಾಲಿಕ ನಿಧನದಿಂದ ಕರಿಯಮ್ಮನಪಾಳ್ಯ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಇಬ್ಬರು ಪುಟ್ಟ ಮಕ್ಕಳನ್ನು ಅಗಲಿರುವ ನಾಗರಾಜು ಅವರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಕುಟುಂಬದ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವುದರಿಂದ ಮನೆಯವರ ದುಃಖ ಹೇಳತೀರದಾಗಿದೆ.
ಮೃತ ಸಂದೀಪ್ ಚಳ್ಳಕೆರೆ ತಾಲೂಕಿನ ನಿವಾಸಿಯಾಗಿದ್ದು, ಬೆಳ್ಳಿಬಟ್ಲು ಸಮೀಪ ಕುರಿ ಮಂದೆಯನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅರಸೀಕೆರೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ವಿಜಯಕುಮಾರ್, ಸಹಾಯಕ ಸಬ್ಇನ್ಸ್ಪೆಕ್ಟರ್ ಗೋಕರ್ಣ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಸ್ತೆ ಸುರಕ್ಷತೆ ಪಾಲನೆಗೆ ಮನವಿ
ರಸ್ತೆಗಳಲ್ಲಿ ಸಂಚರಿಸುವಾಗ ವಾಹನ ಸವಾರರು ವೇಗದ ಮಿತಿ, ಹೆಲ್ಮೆಟ್ ಧಾರಣೆ ಸೇರಿದಂತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಜಾಗರೂಕ ಚಾಲನೆ ಹಾಗೂ ಅತಿವೇಗದಿಂದ ದೂರವಿದ್ದು, ತಮ್ಮ ಜೀವದ ಜೊತೆಗೆ ಇತರರ ಜೀವದ ಸುರಕ್ಷತೆಯ ಬಗ್ಗೆಯೂ ಜಾಗ್ರತೆ ವಹಿಸಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
