ಭಾರತೀಯ ಸಂಪ್ರದಾಯಗಳಲ್ಲಿ ಕಾಗೆಗಳಿಗೆ ವಿಶೇಷ ಮಹತ್ವವಿದೆ. ಪೂರ್ವಜರ ಆರಾಧನೆ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳಲ್ಲಿ ಕಾಗೆಗಳಿಗೆ ಸ್ಥಾನ ನೀಡಲಾಗಿದೆ. ಇಂತಹ ಕಾಗೆಗಳ ಬುದ್ಧಿವಂತಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಕುರಿತು ಜರ್ಮನಿಯ ವಿಜ್ಞಾನಿಗಳು ನಡೆಸಿದ ಅಧ್ಯಯನ ಇದೀಗ ಗಮನ ಸೆಳೆದಿದೆ. ಮನುಷ್ಯರು ಮತ್ತು ಕೋತಿಗಳಿಗಿಂತಲೂ ವೇಗವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಾಗೆಗಳಿಗೆ ಇದೆ ಎಂಬ ಅಚ್ಚರಿಯ ಅಂಶ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲಯದ ನರವಿಜ್ಞಾನಿಗಳಾದ ಆಂಡ್ರಿಯಾಸ್ ನೀಡರ್ ಮತ್ತು ಫಿಲಿಪ್ ಶಿಮಿಡ್ಬೌರ್ ಈ ಸಂಶೋಧನೆ ನಡೆಸಿದ್ದಾರೆ. ಕಾಗೆಗಳ ದೃಷ್ಟಿ ಗ್ರಹಿಕೆ ಮತ್ತು ಮೆದುಳಿನ ನರಕೋಶಗಳ ಕಾರ್ಯವೈಖರಿಯನ್ನು ಅಧ್ಯಯನ ಮಾಡಿರುವ ವಿಜ್ಞಾನಿಗಳು, ಅವುಗಳ ಚುರುಕುತನದ ಕುರಿತು ಹಲವು ಮಹತ್ವದ ಅಂಶಗಳನ್ನು ಗುರುತಿಸಿದ್ದಾರೆ. ಈ ಸಂಶೋಧನಾ ವರದಿ ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್ನಲ್ಲಿ ಪ್ರಕಟವಾಗಿದೆ ಎಂದು ತಿಳಿಸಲಾಗಿದೆ.
ಸಂಶೋಧನೆಯ ಭಾಗವಾಗಿ ಕಾಗೆಗಳ ಮುಂದೆ ಕಂಪ್ಯೂಟರ್ ಪರದೆಯಲ್ಲಿ ವಿವಿಧ ದಿಕ್ಕುಗಳಲ್ಲಿ ಚಲಿಸುವ ಚುಕ್ಕೆಗಳ ಮಾದರಿಗಳನ್ನು ಪ್ರದರ್ಶಿಸಲಾಗಿತ್ತು. ಚುಕ್ಕೆಗಳು ಯಾವ ದಿಕ್ಕಿನಲ್ಲಿ ಚಲಿಸುತ್ತಿವೆ ಎಂಬುದನ್ನು ಗುರುತಿಸಿ ಪ್ರತಿಕ್ರಿಯಿಸುವಂತೆ ಕಾಗೆಗಳಿಗೆ ತರಬೇತಿ ನೀಡಲಾಗಿತ್ತು. ಸರಿಯಾದ ದಿಕ್ಕನ್ನು ಗುರುತಿಸಿ ಪರದೆಯಲ್ಲಿನ ನಿರ್ದಿಷ್ಟ ಚುಕ್ಕೆಯನ್ನು ಕೊಕ್ಕಿನಿಂದ ಕುಕ್ಕಿದಾಗ ಅವುಗಳಿಗೆ ಆಹಾರ ನೀಡುವ ಮೂಲಕ ಪ್ರಯೋಗ ನಡೆಸಲಾಯಿತು.
ಈ ಪ್ರಯೋಗದಲ್ಲಿ ಕಾಗೆಗಳು, ಮನುಷ್ಯರು ಮತ್ತು ಕೋತಿಗಳ ನಿರ್ಧಾರ ತೆಗೆದುಕೊಳ್ಳುವ ವೇಗವನ್ನು ಹೋಲಿಕೆ ಮಾಡಲಾಗಿದೆ. ಮನುಷ್ಯರು ಮತ್ತು ಕೋತಿಗಳು ನಿರ್ಧಾರಕ್ಕೆ ಬರಲು ಸುಮಾರು 400ರಿಂದ 500 ಮಿಲಿಸೆಕೆಂಡ್ಗಳನ್ನು ತೆಗೆದುಕೊಂಡರೆ, ಕಾಗೆಗಳು ಕೇವಲ 235 ಮಿಲಿಸೆಕೆಂಡ್ಗಳಲ್ಲಿ ನಿರ್ಧಾರ ತೆಗೆದುಕೊಂಡಿವೆ ಎಂದು ಅಧ್ಯಯನ ವರದಿ ತಿಳಿಸಿದೆ.ವಿಶೇಷವೆಂದರೆ, ಕಾಗೆಗಳು ವೇಗವಾಗಿ ನಿರ್ಧಾರ ತೆಗೆದುಕೊಳ್ಳುವುದಷ್ಟೇ ಅಲ್ಲದೆ, ಸರಿಯಾದ ಮತ್ತು ನಿಖರವಾದ ಪ್ರತಿಕ್ರಿಯೆಯನ್ನೂ ನೀಡಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಪ್ರಯೋಗದ ವೇಳೆ ಕಂಪ್ಯೂಟರ್ ಪರದೆಯಲ್ಲಿದ್ದ ಚುಕ್ಕೆಗಳಲ್ಲಿ ಕೇವಲ ಶೇ.3ರಷ್ಟು ಚುಕ್ಕೆಗಳು ಮಾತ್ರ ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದವು. ಉಳಿದ ಚುಕ್ಕೆಗಳು ಬೇರೆ ಬೇರೆ ದಿಕ್ಕುಗಳಲ್ಲಿ ಚಲಿಸುತ್ತಿದ್ದ ಕಾರಣ ಸರಿಯಾದ ದಿಕ್ಕನ್ನು ಗುರುತಿಸುವುದು ಸುಲಭವಾಗಿರಲಿಲ್ಲ.ಆದರೆ ಇಂತಹ ಗೊಂದಲದ ಪರಿಸ್ಥಿತಿಯಲ್ಲಿಯೂ ಕಾಗೆಗಳು ಅತ್ಯಂತ ಚುರುಕಾಗಿ ಸರಿಯಾದ ದಿಕ್ಕನ್ನು ಗುರುತಿಸಿ ಪ್ರತಿಕ್ರಿಯಿಸಿವೆ ಎಂದು ಸಂಶೋಧಕ ಫಿಲಿಪ್ ತಿಳಿಸಿದ್ದಾರೆ. ಇದರಿಂದ ಕಾಗೆಗಳ ದೃಶ್ಯ ಗ್ರಹಿಕೆ ಮತ್ತು ಮಾಹಿತಿ ಸಂಸ್ಕರಣೆಯ ಸಾಮರ್ಥ್ಯದ ಬಗ್ಗೆ ವಿಜ್ಞಾನಿಗಳಿಗೆ ಹೊಸ ತಿಳಿವಳಿಕೆ ದೊರೆತಿದೆ.
ಕಾಗೆಗಳು ಆಹಾರ ಹುಡುಕುತ್ತಾ ಹಾರಾಡುವ ಸಂದರ್ಭದಲ್ಲಿ ಇತರ ಪಕ್ಷಿಗಳು ಮತ್ತು ಪ್ರಾಣಿಗಳ ದಾಳಿಯಿಂದಲೂ ತಪ್ಪಿಸಿಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸಲು ಅವುಗಳಲ್ಲಿ ವೇಗವಾಗಿ ಮಾಹಿತಿ ಗ್ರಹಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ವಿಕಸನಗೊಂಡಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.ಅಪಾಯದ ಸೂಚನೆಗಳನ್ನು ತಕ್ಷಣವೇ ಗುರುತಿಸುವುದು, ಸುತ್ತಮುತ್ತಲಿನ ಚಲನವಲನಗಳನ್ನು ಗಮನಿಸುವುದು ಹಾಗೂ ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯಿಸುವುದು ಕಾಗೆಗಳ ಬದುಕುಳಿಯುವ ಸಾಮರ್ಥ್ಯಕ್ಕೆ ನೆರವಾಗುತ್ತದೆ.
ಕಾಗೆಗಳು ಕೇವಲ ಸಾಮಾನ್ಯ ಪಕ್ಷಿಗಳಲ್ಲ; ಅವುಗಳ ಮೆದುಳಿನ ಕಾರ್ಯವೈಖರಿ, ದೃಷ್ಟಿ ಗ್ರಹಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ವೇಗ ವಿಜ್ಞಾನಿಗಳ ಗಮನ ಸೆಳೆಯುತ್ತಿದೆ. ಮನುಷ್ಯರಿಗಿಂತ ವೇಗವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಕುರಿತ ಈ ಅಧ್ಯಯನ ಕಾಗೆಗಳ ಬುದ್ಧಿವಂತಿಕೆಯ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
