ಬಳ್ಳಾರಿ: ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಬಲಿಯಾಗದೆ, ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ವಿದ್ಯಾರ್ಥಿನಿಯರು ಕಷ್ಟಪಟ್ಟು ಓದಿ ಸ್ವಾವಲಂಬಿಗಳಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದಲಿಂಗ ಪ್ರಭು ಅವರು ಹೇಳಿದರು.
ರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ, ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ‘ಸುರಕ್ಷಿತ ಬಚಪನ್ ಅಭಿಯಾನ’ದ ಪೋಕ್ಸೋ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ತಡೆಗಟ್ಟಲು ಹಾಗೂ ಮಕ್ಕಳ ರಕ್ಷಣೆಗೆ ಸಂಬAಧಿಸಿದ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ‘ಸುರಕ್ಷಿತ ಬಾಲ್ಯ ಅಭಿಯಾನ’ದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಾಲ್ಯವಿವಾಹ ಕಾನೂನುಬಾಹಿರವಾಗಿದ್ದು, ಅಪ್ರಾಪ್ತ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದರಿಂದ ಎದುರಾಗುವ ಸಂಕಷ್ಟಗಳು ಹಾಗೂ ನಂತರ ದಾಖಲಾಗುವ ಪೋಕ್ಸೊ ಪ್ರಕರಣಗಳ ಗಂಭೀರತೆಯ ಬಗ್ಗೆ ಎಚ್ಚರಿಸಿದ ಅವರು, ವೈದ್ಯರು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರು ಮಾತನಾಡಿ, 18 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ಬಾಲ್ಯವಿವಾಹ ಮಾಡುವುದು ಕಾನೂನುಬಾಹಿರ ಮತ್ತು ಅಸಿಂಧು. ಬಾಲ್ಯವಿವಾಹ ಆಯೋಜಿಸುವ ಹಾಗೂ ಅದಕ್ಕೆ ನೆರವಾಗುವ ಪೋಷಕರು, ಅರ್ಚಕರು ಸೇರಿದಂತೆ ಭಾಗಿಯಾದ ಎಲ್ಲರಿಗೂ ಕನಿಷ್ಠ 2 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಅವರು ಮಾತನಾಡಿ, ಬಾಲ್ಯವಿವಾಹದಿಂದ ಹದಿಹರೆಯದಲ್ಲೇ ಗರ್ಭಧಾರಣೆಯಾಗಿ ತಾಯಿ–ಮಗುವಿನ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುವುದರ ಜೊತೆಗೆ ಅಪೌಷ್ಟಿಕತೆ ಮತ್ತು ತಾಯಿ ಮರಣದಂತಹ ಅಪಾಯಗಳು ಸಂಭವಿಸುತ್ತವೆ ಎಂದು ತಿಳಿಸಿದರು.
ಮಕ್ಕಳ ತುರ್ತು ರಕ್ಷಣೆ ಹಾಗೂ ನೆರವಿಗಾಗಿ ಮಕ್ಕಳ ಸಹಾಯವಾಣಿ 1098 ಮತ್ತು ತುರ್ತು ಪೊಲೀಸ್ ಸಹಾಯಕ್ಕಾಗಿ 112 ಸಂಖ್ಯೆಯನ್ನು ಸಂಪರ್ಕಿಸಬಹುದು. ಗ್ರಾಮವನ್ನು ಬಾಲ್ಯವಿವಾಹ ಮುಕ್ತ, ಪೋಕ್ಸೋ ಮುಕ್ತ ಹಾಗೂ ಬಾಲಕಾರ್ಮಿಕ ಮುಕ್ತಗೊಳಿಸಲು ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗಣ್ಯರು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಮಾಹಿತಿ ಕುರಿತ ಭಿತ್ತಿಪತ್ರಗಳನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂಡೂರು ತಾಪಂ ಇಓ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್ ಅಕ್ಕಿ, ಸಂಡೂರು ಪೊಲೀಸ್ ವೃತ್ತದ ಸಿಪಿಐ ಮಹೇಶ್ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು, ಪೋಷಕರು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
