ಮಧುಗಿರಿ : ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಡಿದ್ದಾರೆ ಎನ್ನಲಾದ ‘ಹಳ್ಳಿಗುಗ್ಗು’ ಎಂಬ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ‘ನಾವು ಹಳ್ಳಿಗುಗ್ಗುಗಳೇ ಏನಿವಾಗ?’ ಎಂಬ ಅಭಿಯಾನ ಆರಂಭಿಸಿದ್ದು, ಸಚಿವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಬಿಜವರ ಶ್ರೀನಿವಾಸ್, ಪ್ರಿಯಾಂಕ್ ಖರ್ಗೆ ಅವರು ತಮ್ಮ ಹೇಳಿಕೆಗೆ ತಕ್ಷಣ ಕ್ಷಮೆಯಾಚಿಸಬೇಕು. ನಿಮ್ಮ ಕ್ಷೇತ್ರದಲ್ಲಿ ಹಳ್ಳಿಗಳಿಲ್ಲವೇ? ಅಲ್ಲಿನ ಗ್ರಾಮಸ್ಥರು ನಿಮಗೆ ಮತ ಹಾಕಿಲ್ಲವೇ? ದೇಶದ ಶೇ.70ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಕೋಟ್ಯಂತರ ಗ್ರಾಮೀಣ ಜನರ ಭಾವನೆಗಳಿಗೆ ನಿಮ್ಮ ಹೇಳಿಕೆ ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳಿಯ ಜನರು ದುಡಿಯದಿದ್ದರೆ ನಗರ ಪ್ರದೇಶದ ಜನರಿಗೆ ಆಹಾರ, ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ದೊರೆಯುವುದಿಲ್ಲ. ಕುಮಾರಸ್ವಾಮಿ ಹಾಗೂ ದೇವೇಗೌಡರ ರಾಜಕೀಯ ಕೊಡುಗೆ ಏನೆಂಬುದು ದೇಶಕ್ಕೆ ತಿಳಿದಿದೆ. ರಾಜಕೀಯ ನಾಯಕರನ್ನು ಟೀಕಿಸುವ ಭರದಲ್ಲಿ ರೈತರು ಹಾಗೂ ಗ್ರಾಮೀಣ ಜನರನ್ನು ಅವಮಾನಿಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರ ಜಿಲ್ಲಾ ಒಕ್ಕೂಟದ ಅಧ್ಯಕ್ಷ ದೊಡ್ಡೇರಿ ವಿಜಿಕುಮಾರ್ ಮಾತನಾಡಿ, ರಾಜಕೀಯ ನಾಯಕರ ಓಲೈಕೆಗಾಗಿ ಗ್ರಾಮೀಣ ಜನರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ. ಆಡಳಿತಾರೂಢ ಪಕ್ಷದ ಜವಾಬ್ದಾರಿಯುತ ಸಚಿವರಾಗಿ ಬಳಸುವ ಪದಗಳ ಬಗ್ಗೆ ಎಚ್ಚರಿಕೆ ಇರಬೇಕು. ಆಡುಭಾಷೆಯ ಮಾತು ಎಂದು ಸಮರ್ಥಿಸಿಕೊಳ್ಳುವವರು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಇದೇ ರೀತಿಯ ಪದಗಳನ್ನು ಬಳಸಿದರೆ ಹೇಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಹಿನ್ನಡೆ ಉಂಟುಮಾಡಲಿದೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಹಿಂದುಳಿದ ವರ್ಗದ ಮುಖಂಡೆ ಲಕ್ಷ್ಮಮ್ಮ ವೀರಣ್ಣಗೌಡ ಮಾತನಾಡಿ, ಹಳ್ಳಿಯ ಮಣ್ಣಿನ ಮಕ್ಕಳ ಶಕ್ತಿ ಮತ್ತು ಸಾಮರ್ಥ್ಯ ಇಡೀ ದೇಶಕ್ಕೆ ತಿಳಿದಿದೆ. ರೈತರು ಬೆಳೆದ ಆಹಾರ ಪದಾರ್ಥಗಳು, ಹಾಲು, ಹಣ್ಣು ಹಾಗೂ ತರಕಾರಿಗಳಿಲ್ಲದೆ ನಗರ ಪ್ರದೇಶದ ಜನರ ಬದುಕು ಸಾಧ್ಯವಿಲ್ಲ. ಗ್ರಾಮೀಣ ಜನರ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತವಿರಬೇಕು. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಪರವಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ. ಗ್ರಾಮೀಣ ಜನರ ಭಾವನೆಗಳಿಗೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪರಿಶಿಷ್ಟ ಪಂಗಡ ಘಟಕದ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ರಾಜಕೀಯ ಅನುಭವದ ಮುಂದೆ ಪ್ರಿಯಾಂಕ್ ಖರ್ಗೆ ಅವರ ಅನುಭವ ಕಡಿಮೆ. ಇಂತಹ ಹಿರಿಯ ನಾಯಕರನ್ನು ಹಳ್ಳಿಗುಗ್ಗು ಎಂದು ಸಂಬೋಧಿಸಿರುವುದು ಅವರ ಅಹಂಕಾರವನ್ನು ತೋರಿಸುತ್ತದೆ. ಅನ್ನದಾತರ ಬಗ್ಗೆ ಕೀಳಾಗಿ ಮಾತನಾಡಿರುವುದಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಬೆಲೆ ತೆರಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಹೋಬಳಿ ಅಧ್ಯಕ್ಷರಾದ ನರಸಿಂಹರೆಡ್ಡಿ, ಮೂರ್ತಣ್ಣ, ರಾಮಚಂದ್ರಣ್ಣ, ಗೋಪಾಲ್, ರವಿಕುಮಾರ್, ಮುಖಂಡರಾದ ಸಿದ್ದರಗಲ್ಲು ಶ್ರೀನಿವಾಸ್, ದ್ವಾರಕೀಶ್, ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ರಾಮಚಂದ್ರ, ಗೋವಿಂದರಾಜು, ರಂಗನಾಥ್, ಚಂದ್ರಕುಮಾರ್, ಬಾವಿಮನೆ ಕಾಂತಣ್ಣ, ಉಮೇಶ್, ಗಬಾಲಿ ರಾಜಣ್ಣ, ಮೋಹನ್, ಶ್ರೇಯಸ್, ಟಪಾಲ್ ಮಂಜುನಾಥ್, ಗಂಗರಾಜು, ನರಸಿಂಹರಾಜು, ಭಾಸ್ಕರರೆಡ್ಡಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
