ಮಧುಗಿರಿ: ಪ್ರತಿ ಎಕರೆ ಹಿಪ್ಪು ನೇರಳೆ ತೋಟದಲ್ಲಿ 300 ಮೊಟ್ಟೆ ಚಾಕಿ ಕಟ್ಟಿ ವೈಜ್ಞಾನಿಕ ಪದ್ಧತಿಯಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮಾಡಿದರೆ ಸುಮಾರು 250 ಕೆ.ಜಿ. ರೇಷ್ಮೆ ಗೂಡು ಉತ್ಪಾದನೆ ಮಾಡಬಹುದು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ರೇಷ್ಮೆ ಬೆಳೆಗಾರರಿಗಾಗಿ ಆಯೋಜಿಸಿದ್ದ ಗುಂಪು ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಪ್ಪು ನೇರಳೆ ಬೇಸಾಯದಲ್ಲಿ ರೇಷ್ಮೆ ಇಲಾಖೆಯಿಂದ ಶಿಫಾರಸು ಮಾಡಲಾದ ಕೀಟನಾಶಕಗಳನ್ನೇ ಬಳಸಬೇಕು. ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸುವ ಮೊದಲು ನಿವೇಶನದ ದಾಖಲೆಗಳನ್ನು ದಿಶಾಂಕ್ ಆ್ಯಪ್ ಮೂಲಕ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಈ ಮುನ್ನೆಚ್ಚರಿಕೆ ಕ್ರಮಗಳಿಂದ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಇಲಾಖೆಯಿಂದ ವಿವಿಧ ಸೌಲಭ್ಯಗಳು: ಎಸ್. ಸ್ವಾಮಿ ನಾಯ್ಕ್
ರೇಷ್ಮೆ ವಿಸ್ತರಣಾಧಿಕಾರಿ ಎಸ್. ಸ್ವಾಮಿ ನಾಯ್ಕ್ ಮಾತನಾಡಿ, ರೇಷ್ಮೆ ಕೃಷಿ ಕೈಗೊಳ್ಳುವ ರೈತರಿಗೆ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಸಹಾಯಧನಗಳ ಕುರಿತು ಮಾಹಿತಿ ನೀಡಿದರು.
ಒಂದು ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ನಾಟಿ ಮಾಡಲು ವಿಬಿಜಿ ರಾಮ್ ಜಿ ಯೋಜನೆಯಡಿ 50ರಿಂದ 60 ಸಾವಿರ ರೂ.ವರೆಗೆ ಸಹಾಯಧನ ಲಭ್ಯವಿದೆ. ಒಂದು ಎಕರೆ ಹಿಪ್ಪು ನೇರಳೆ ತೋಟಕ್ಕೆ ಹನಿ ನೀರಾವರಿ ಅಳವಡಿಸಿಕೊಂಡರೆ 35ರಿಂದ 40 ಸಾವಿರ ರೂ.ವರೆಗೆ ಸಹಾಯಧನ ಪಡೆಯಬಹುದು ಎಂದು ತಿಳಿಸಿದರು.
ಅದೇ ರೀತಿ 1,000 ಚದರ ಅಡಿ ವಿಸ್ತೀರ್ಣದ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಾಮಾನ್ಯ ವರ್ಗದವರಿಗೆ 3,37,500 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 4.50 ಲಕ್ಷ ರೂ. ಸಹಾಯಧನ ದೊರೆಯಲಿದೆ.
ರೇಷ್ಮೆ ಹುಳು ಸಾಕಾಣಿಕೆಗೆ ಅಗತ್ಯವಿರುವ ಪ್ಲಾಸ್ಟಿಕ್ ಚಂದ್ರಿಕೆ, ಪವರ್ ಸ್ಪ್ರೇಯರ್ ಸೇರಿದಂತೆ ವಿವಿಧ ಸಲಕರಣೆಗಳ ಖರೀದಿಗೆ ಇತರೆ ವರ್ಗದ ರೈತರಿಗೆ ಶೇ.75ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನ ಲಭ್ಯವಿದೆ ಎಂದು ವಿವರಿಸಿದರು.
ರೇಷ್ಮೆ ಗೂಡಿಗೆ ಉತ್ತಮ ಬೆಲೆ: ರಮೇಶ್
ರೇಷ್ಮೆ ನಿರೀಕ್ಷಕ ರಮೇಶ್ ಮಾತನಾಡಿ, ಪ್ರಸ್ತುತ ಒಂದು ಕೆ.ಜಿ. ದ್ವಿತಳಿ ರೇಷ್ಮೆ ಗೂಡಿಗೆ 900ರಿಂದ 1,000 ರೂ.ವರೆಗೆ ಬೆಲೆ ದೊರೆಯುತ್ತಿದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು ರೇಷ್ಮೆ ಕೃಷಿಯನ್ನು ಉಪಕಸುಬಾಗಿ ಅಥವಾ ಪ್ರಮುಖ ಕೃಷಿಯಾಗಿ ಕೈಗೊಂಡು ಇಲಾಖೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರೇಷ್ಮೆ ಕೃಷಿಯತ್ತ ರೈತರು ಒಲವು ತೋರಲಿ: ತಿಮ್ಮರಾಯಪ್ಪ
ಗ್ರಾಮದ ಪ್ರಗತಿಪರ ರೈತ ಹಾಗೂ ರೇಷ್ಮೆ ಬೆಳೆಗಾರ ತಿಮ್ಮರಾಯಪ್ಪ ಮಾತನಾಡಿ, ರೇಷ್ಮೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮತ್ತು ತಾಂತ್ರಿಕ ಸಲಹೆಗಳನ್ನು ಸಮರ್ಪಕವಾಗಿ ಅನುಸರಿಸಿದರೆ ರೈತರು ಉತ್ತಮ ಆದಾಯ ಗಳಿಸಲು ಸಾಧ್ಯವಿದೆ. ಪ್ರಸ್ತುತ ರೇಷ್ಮೆ ಗೂಡಿಗೆ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ಹೆಚ್ಚಿನ ರೈತರು ರೇಷ್ಮೆ ಕೃಷಿಯತ್ತ ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮದ ರೇಷ್ಮೆ ಬೆಳೆಗಾರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
