ಪಾವಗಡ : ಬಡತನದ ಸವಾಲುಗಳನ್ನು ಮೆಟ್ಟಿ ನಿಂತು, ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದಿರುವ ಯುವ ವೈದ್ಯ ಡಾ. ರಾಜೇಶ್ ಅವರು ಸ್ವಂತ ಕ್ಲಿನಿಕ್ ಆರಂಭಿಸುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ ಎಂದು ಶಾಸಕ ಎಚ್.ವಿ. ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಮೀನ ಕುಮಾರಿ ನರ್ಸಿಂಗ್ ಹೋಮ್ ಎದುರು, ಆಂಧ್ರಗಿರಿ ಭವನದ ಪಕ್ಕದಲ್ಲಿ ಗುರುವಾರ ನೂತನವಾಗಿ ಆರಂಭಗೊಂಡ ಡಾ. ರಾಜೇಶ್ ಸ್ಪೆಷಾಲಿಟಿ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನದ ನಡುವೆಯೂ ಶಿಕ್ಷಣ ಪಡೆದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ರಾಜೇಶ್ ಅವರ ಜೀವನ ಇಂದಿನ ಯುವಜನತೆಗೆ ಪ್ರೇರಣೆಯಾಗಿದೆ. ಪರಿಶ್ರಮ, ಛಲ ಮತ್ತು ಸಾಧಿಸುವ ಹಂಬಲದಿಂದ ವೈದ್ಯರಾಗಿ ಬೆಳೆದಿರುವ ಅವರು, ಇದೀಗ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕ್ಲಿನಿಕ್ ಆರಂಭಿಸಿರುವುದು ಶ್ಲಾಘನೀಯ. ತಾವು ಎದುರಿಸಿದ ಕಷ್ಟಗಳನ್ನು ಅರಿತು ಆರೋಗ್ಯ ಸೇವೆಯ ಅಗತ್ಯವಿರುವ ಜನರಿಗೆ ನೆರವಾಗಬೇಕೆಂಬ ಅವರ ಸೇವಾ ಮನೋಭಾವ ಮೆಚ್ಚುವಂತಹದ್ದು ಎಂದರು.
ಶ್ರೀ ಗುರುನಾಥ ಸ್ವಾಮೀಜಿಗಳು ಆಶೀರ್ವಚನ ನೀಡಿ, ನೂತನ ಕ್ಲಿನಿಕ್ ಮೂಲಕ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿ. ವೈದ್ಯರ ಸೇವಾ ಕಾರ್ಯದಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿ. ಡಾ. ರಾಜೇಶ್ ಅವರು ಇನ್ನಷ್ಟು ಜನರಿಗೆ ನೆರವಾಗುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.
ನೂತನ ಕ್ಲಿನಿಕ್ ನಲ್ಲಿ ಔಷಧಾಲಯ ಹಾಗೂ ಪ್ರಯೋಗಾಲಯ ಸೇರಿದಂತೆ ಅಗತ್ಯ ಆರೋಗ್ಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಸಾರ್ವಜನಿಕರು ಸುಲಭವಾಗಿ ಹಾಗೂ ಅನುಕೂಲಕರವಾಗಿ ಆರೋಗ್ಯ ಸೇವೆ ಪಡೆಯಲು ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ಡಾ. ರಾಜೇಶ್ ಅವರ ತಂದೆ ಯಲ್ಲಪ್ಪ, ಗುತ್ತಿಗೆದಾರ ಶಂಕರ್ ರೆಡ್ಡಿ, ಕಲ್ಪವೃಕ್ಷ ರವಿ, ಇನ್ಸ್ಪೆಕ್ಟರ್ ಸುರೇಶ್, ನವೀನ್ ಕಿಲಾರ್ಲಹಳ್ಳಿ, ಕೊಂಡಪ್ಪ, ಕೊತ್ತೂರು ಹನುಮಂತರಾಯಪ್ಪ, ಗುತ್ತಿಗೆದಾರ ಸುರೇಶ್, ಜಿ. ವೆಂಕಟೇಶ್, ಮಂಜುನಾಥ್, ರಂಗಪ್ಪ, ಕಾರನಾಗಪ್ಪ, ಕಾರನಾಗನಹಟ್ಟಿ ಗ್ರಾಮದವರು, ಗುಡಿಕಲ್ ಮಾರ್ಗದ ಗುರುಗಳ ಭಕ್ತಾದಿಗಳು ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
