ಪಾವಗಡ : ತುಮಕೂರು ಜಿಲ್ಲಾ ನಾಯಕ ನೌಕರರ ಸಂಘದ ವತಿಯಿಂದ ನವೆಂಬರ್ 29ರ ಭಾನುವಾರ ತುಮಕೂರು ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭದಲ್ಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಾವಗಡ ತಾಲೂಕು ನಾಯಕ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನೌಕರ ಬಂಧುಗಳು ಹಾಗೂ ಸಮಾಜದ ಮುಖಂಡರ ಸಭೆ ನಡೆಸಿ, ಸಮಾರಂಭದ ಆಹ್ವಾನ ಪತ್ರಿಕೆಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕರೆ ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ನಾಯಕ ನೌಕರರ ಸಂಘದ ಅಧ್ಯಕ್ಷ ಜಯರಾಮ್, ತುಮಕೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಮಾಜದ ಬಂಧುಗಳು ಹಾಗೂ ನೌಕರರು ಪಾವಗಡ ತಾಲೂಕಿನಲ್ಲಿ ಇದ್ದಾರೆ. ಹೀಗಾಗಿ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷ ಎನ್. ಅನಿಲ್ ಕುಮಾರ್ ಮಾತನಾಡಿ, ಸಮುದಾಯದ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ವಿಚಾರದಲ್ಲಿ ಸಮುದಾಯಕ್ಕೆ ಆಗಿರುವ ಹಿನ್ನಡೆಯ ಕುರಿತು ಸಮಾಜದ ಮುಖಂಡರ ಮೂಲಕ ಸರ್ಕಾರದ ಗಮನ ಸೆಳೆಯುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸಮುದಾಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದರು.
ಸಾಧಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಪಾವಗಡ ತಾಲೂಕು ಗಿರಿಜನ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಚಿತ್ತಯ್ಯ ಹಾಗೂ ಕರ್ನಾಟಕ ಮೀಡಿಯಾ ಕ್ಲಬ್, ಬೆಂಗಳೂರು ವತಿಯಿಂದ ನೀಡಲಾಗುವ ‘ಕರುನಾಡ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಲೋಕೇಶ್ ಪಾಳೇಗಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷ ಇ.ಇ.ಒ. ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಿಂಗಣ್ಣ, ನಿವೃತ್ತ ಪ್ರಾಂಶುಪಾಲ ಮಾರಪ್ಪ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಮಾಂಜಿ, ಕರವೇ ಅಧ್ಯಕ್ಷ ಲಕ್ಷ್ಮೀನಾರಾಯಣ್, ಶಿಕ್ಷಕರಾದ ಆನಂದಪ್ಪ, ಮಲ್ಲಿಕಾರ್ಜುನ್, ಓಬಳೇಶ್ ಪಾಳೇಗಾರ್, ಗಂಗಾಧರ್, ಶಾಂತಕುಮಾರಿ, ಸಮುದಾಯದ ಮುಖಂಡರಾದ ಕೆ. ರಾಂಪುರ ಆನಂದ್, ಓಂಕಾರ್ ನಾಯಕ, ಪ್ರಕಾಶ್ ನಾಯಕ, ಬೇಕರಿ ನಾಗರಾಜ್, ಟೈಲರ್ ನಾರಾಯಣಪ್ಪ, ಮಂಜುನಾಥ್ ಪಾಳೇಗಾರ್, ಮಾರಣ್ಣ, ಮಲ್ಲಿಕಾರ್ಜುನ, ಆಟೋ ಸತ್ತಿ, ಬಲರಾಮ್, ಗಾದಿಗುಂಟೆ ಮಲ್ಲಿಕಾರ್ಜುನ್, ಅಶ್ವಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
