ಬೆಂಗಳೂರು, ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕೆಂಪು ದೀಪ ಬಿದ್ದಾಗ ವಾಹನಗಳು ನಿಂತರೂ ಹಿಂದಿನಿಂದ ಹಾರ್ನ್ ಸದ್ದು ಮಾತ್ರ ನಿಲ್ಲುವುದಿಲ್ಲ. ಒಂದು ಕ್ಷಣ ತಡವಾದರೂ ವಾಹನ ಸವಾರರು ಅಸಹನೆ ವ್ಯಕ್ತಪಡಿಸುವುದು ಸಾಮಾನ್ಯ. ಟ್ರಾಫಿಕ್ ಕಿರಿಕಿರಿ, ಹಾರ್ನ್ ಶಬ್ದಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಆದರೆ, ಭಾರತದ ಈಶಾನ್ಯ ಭಾಗದಲ್ಲಿರುವ ಒಂದು ನಗರ ಮಾತ್ರ ಇಂತಹ ಗದ್ದಲದ ಟ್ರಾಫಿಕ್ ಸಂಸ್ಕೃತಿಗೆ ತದ್ವಿರುದ್ಧವಾಗಿದೆ. ಇಲ್ಲಿ ವಾಹನಗಳ ದಟ್ಟಣೆ ಇದ್ದರೂ ಅನಗತ್ಯ ಹಾರ್ನ್ ಸದ್ದು ಕೇಳುವುದು ಅಪರೂಪ.
ಅಷ್ಟೇ ಅಲ್ಲ, ಇತರರಿಗೆ ತೊಂದರೆಯಾಗುವಂತೆ ಹಾರ್ನ್ ಮಾಡುವುದು ಅಸಭ್ಯ ವರ್ತನೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಟ್ರಾಫಿಕ್ ಜಾಮ್ ಉಂಟಾದಾಗಲೂ ವಾಹನ ಸವಾರರು ಪರಸ್ಪರ ತಾಳ್ಮೆಯಿಂದ ವರ್ತಿಸುತ್ತಾರೆ. ಹಾಗಾದರೆ, ಭಾರತದ ಈ ಶಾಂತ ನಗರ ಯಾವುದು? ಅಲ್ಲಿನ ಜನರಲ್ಲಿ ಇಂತಹ ಶಿಸ್ತು ಬೆಳೆದುಬಂದಿರುವುದಕ್ಕೆ ಕಾರಣವೇನು?
ಹಾರ್ನ್ ಮಾಡುತ್ತಾ ಮುನ್ನುಗ್ಗುವ ಆತುರವಿಲ್ಲ, ನಿಯಮ ಮೀರಿ ಓವರ್‌ಟೇಕ್ ಮಾಡುವ ಧಾವಂತವಿಲ್ಲ, ತಪ್ಪು ಲೇನ್‌ನಲ್ಲಿ ನುಗ್ಗುವ ಪ್ರಯತ್ನವೂ ಇಲ್ಲ. ರಸ್ತೆಯಲ್ಲಿ ವಾಹನಗಳ ಸಾಲು ಉದ್ದವಾಗಿದ್ದರೂ ಚಾಲಕರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುತ್ತಾರೆ. ಇಂತಹ ಶಿಸ್ತಿನ ಟ್ರಾಫಿಕ್ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ನಗರವೇ ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್.ಬೆಟ್ಟಗುಡ್ಡಗಳ ನಡುವೆ ನೆಲೆಸಿರುವ ಈ ನಗರ ತನ್ನ ನೈಸರ್ಗಿಕ ಸೌಂದರ್ಯದ ಜತೆಗೆ ನಾಗರಿಕ ಪ್ರಜ್ಞೆ ಮತ್ತು ಶಿಸ್ತಿನ ಜೀವನಶೈಲಿಗೂ ಗಮನ ಸೆಳೆಯುತ್ತದೆ. ಕಿರಿದಾದ ಹಾಗೂ ಕಡಿದಾದ ರಸ್ತೆಗಳಲ್ಲಿಯೂ ವಾಹನ ಸವಾರರು ಪರಸ್ಪರ ಸಹಕಾರದಿಂದ ಸಂಚರಿಸುವುದು ಇಲ್ಲಿನ ವಿಶೇಷತೆ.
ಬೆಟ್ಟಗಳ ಇಳಿಜಾರುಗಳಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿರುವ ಐಜ್ವಾಲ್ ನಗರವನ್ನು ‘ಸ್ಟೇರ್‌ಕೇಸ್ ಸಿಟಿ’ ಎಂದೂ ಕರೆಯಲಾಗುತ್ತದೆ. ಬೆಟ್ಟದ ಪ್ರದೇಶವಾಗಿರುವುದರಿಂದ ಇಲ್ಲಿನ ರಸ್ತೆಗಳು ಹಲವು ಕಡೆಗಳಲ್ಲಿ ಕಿರಿದಾಗಿದ್ದು, ಕಡಿದಾದ ತಿರುವುಗಳನ್ನು ಹೊಂದಿವೆ. ಇಂತಹ ಸವಾಲಿನ ರಸ್ತೆಗಳಲ್ಲಿಯೂ ವಾಹನ ಸವಾರರು ಶಿಸ್ತಿನಿಂದ ವರ್ತಿಸುವುದು ಗಮನಾರ್ಹ.ಇಲ್ಲಿನ ಜನರ ಸಂಯಮಕ್ಕೆ ಕೇವಲ ಕಾನೂನು ಅಥವಾ ದಂಡದ ಭಯವೇ ಕಾರಣವಲ್ಲ. ಮಿಜೋ ಸಮುದಾಯದ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ‘ತ್ಲಾವ್ಮ್‌ಗೈಹ್ನಾ’ (Tlawmngaihna) ಎಂಬ ಮೌಲ್ಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ನಿಸ್ವಾರ್ಥತೆ, ಸಹಾಯ ಮನೋಭಾವ, ಶಿಸ್ತು, ಇತರರಿಗೆ ಗೌರವ ನೀಡುವುದು ಮತ್ತು ಸಮಾಜದ ಒಳಿತಿಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಡುವುದನ್ನು ಈ ಮೌಲ್ಯ ಪ್ರತಿಪಾದಿಸುತ್ತದೆ.
ಇದೇ ಸಂಸ್ಕಾರ ರಸ್ತೆ ಸಂಚಾರದಲ್ಲಿಯೂ ಪ್ರತಿಫಲಿಸುತ್ತದೆ. ತಮಗಿಂತ ಮೊದಲು ಇತರರಿಗೆ ಅವಕಾಶ ನೀಡುವುದು, ಅನಗತ್ಯವಾಗಿ ಹಾರ್ನ್ ಮಾಡದಿರುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವುದು ಇಲ್ಲಿನ ಜನರ ಜೀವನಶೈಲಿಯ ಭಾಗವಾಗಿದೆ. ಜತೆಗೆ, ಬೆಟ್ಟದ ರಸ್ತೆಗಳಲ್ಲಿನ ಅಪಾಯಗಳ ಅರಿವು ಕೂಡ ಚಾಲಕರನ್ನು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮಾಡುತ್ತದೆ.ಐಜ್ವಾಲ್ ಶಿಕ್ಷಣ ಮತ್ತು ನಾಗರಿಕ ಪ್ರಜ್ಞೆಯ ವಿಚಾರದಲ್ಲಿಯೂ ಗಮನ ಸೆಳೆಯುತ್ತದೆ. ಮಿಜೋರಾಂ ದೇಶದ ಅತ್ಯಧಿಕ ಸಾಕ್ಷರತೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಶಿಕ್ಷಣದ ಜತೆಗೆ ಸಮುದಾಯದ ಒಗ್ಗಟ್ಟು, ಸ್ವಚ್ಛತೆಯ ಬಗ್ಗೆ ಕಾಳಜಿ ಮತ್ತು ಸಾರ್ವಜನಿಕ ಜವಾಬ್ದಾರಿಯ ಮನೋಭಾವ ಇಲ್ಲಿನ ಜೀವನಶೈಲಿಯಲ್ಲಿ ಮಹತ್ವದ ಪಾತ್ರ ವಹಿಸಿವೆ.
ಸಮುದ್ರ ಮಟ್ಟದಿಂದ ಸುಮಾರು 1,132 ಮೀಟರ್ ಎತ್ತರದಲ್ಲಿರುವ ಐಜ್ವಾಲ್ ಪ್ರಕೃತಿಯ ಮಡಿಲಲ್ಲಿ ನೆಲೆಸಿದೆ. ಹಸಿರು ಬೆಟ್ಟಗಳು, ಕಣಿವೆಗಳು ಮತ್ತು ಸುಂದರ ಪರಿಸರ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮಿಜೋರಾಂನ ಪ್ರಮುಖ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾದ ‘ಚಾಪ್ಚಾರ್ ಕುಟ್’ ಕೂಡ ಇಲ್ಲಿನ ಜನಜೀವನದ ವೈಶಿಷ್ಟ್ಯವನ್ನು ಪರಿಚಯಿಸುತ್ತದೆ. ಐಜ್ವಾಲ್‌ನ ಸೌಂದರ್ಯ ಮತ್ತು ಶಾಂತ ವಾತಾವರಣವನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರು ಮಿಜೋರಾಂ ಪ್ರವೇಶಿಸುವ ಮುನ್ನ ಇನ್ನರ್ ಲೈನ್ ಪರ್ಮಿಟ್ (ILP) ಪಡೆಯಬೇಕು. ಹೊರರಾಜ್ಯದ ಭಾರತೀಯ ನಾಗರಿಕರಿಗೆ ಈ ಅನುಮತಿ ಕಡ್ಡಾಯವಾಗಿದ್ದು, ಆನ್‌ಲೈನ್ ಮೂಲಕ ಅಥವಾ ರಾಜ್ಯದ ಅಧಿಕೃತ ಅನುಮತಿ ಕೇಂದ್ರಗಳ ಮೂಲಕ ಪಡೆಯಬಹುದು. ವಿಮಾನದ ಮೂಲಕ ತೆರಳುವವರು ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿಯೂ ಪರ್ಮಿಟ್ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಳ್ಳಬಹುದು.
ಟ್ರಾಫಿಕ್ ಜಾಮ್ ಎಂದರೆ ಹಾರ್ನ್ ಸದ್ದು, ಅಸಹನೆ ಮತ್ತು ಗದ್ದಲವೇ ಎಂಬಂತಾಗಿರುವ ಮಹಾನಗರಗಳ ನಡುವೆ ಐಜ್ವಾಲ್‌ನ ಸಂಚಾರ ಸಂಸ್ಕೃತಿ ವಿಭಿನ್ನ ಮಾದರಿಯಾಗಿ ಕಾಣಿಸುತ್ತದೆ. ರಸ್ತೆ ಶಿಸ್ತು ಎನ್ನುವುದು ಕೇವಲ ದಂಡದ ಭಯದಿಂದ ಬರುವುದಲ್ಲ; ಅದು ಸಮಾಜದ ಸಂಸ್ಕಾರ ಮತ್ತು ಪರಸ್ಪರ ಗೌರವದಿಂದಲೂ ರೂಪುಗೊಳ್ಳಬಹುದು ಎಂಬುದನ್ನು ಈ ನಗರ ತೋರಿಸಿಕೊಡುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
