ಪಾವಗಡ: ಲಂಬಾಣಿ ಸಮುದಾಯದಲ್ಲಿ ಪ್ರಧಾನ ಹಬ್ಬವಾಗಿ ಹಾಸುಹೊಕ್ಕಾಗಿರುವ ದೀಪಾವಳಿ ಹಬ್ಬವನ್ನು ಪಾವಗಡ ತಾಲ್ಲೂಕಿನ ವಿವಿಧ ತಾಂಡಗಳಲ್ಲಿ ಅಮಾವಾಸ್ಯೆಯ ಶುಕ್ರವಾರ ಮತ್ತು ಪಾಡ್ಯ ಶನಿವಾರಗಳಂದು ವಿಶಿಷ್ಟವಾಗಿ ಆಚರಿಸಲಾಗಿದೆ.
ತಾಲ್ಲೂಕಿನ ಮೇಗಳಪಾಳ್ಯ, ಕೆ.ಸೇವಾಲಾಲ್ ಪುರ, ಹೊಸಹಳ್ಳಿ, ನಾಗೇನಹಳ್ಳಿ, ಭೂಪೂರು, ಜಾಜೂರಾಯನಹಳ್ಳಿ, ಉಪ್ಪಾರಹಳ್ಳಿ, ಪಳವಳ್ಳಿ, ಬಾಲಮ್ಮನಹಳ್ಳಿ ತಾಂಡಾಗಳಲ್ಲಿ ಲಂಬಾಣಿ ಸೊಗಡಿನ ದೀಪಾವಳಿ ಕಳೆಕಟ್ಟಿತ್ತು.
ಪ್ರತಿವರ್ಷದಂತೆ ದೀಪಾವಳಿಯ ಅಮಾವಾಸ್ಯೆ ಮತ್ತು ಪಾಡ್ಯದ ದಿನಗಳಲ್ಲಿ ನೆರವೇರಿದ ಸಡಗರ ಸಂಭ್ರಮದ ಸಾಂಪ್ರದಾಯಿಕ ಲಂಬಾಣಿ ಹಬ್ಬದಲ್ಲಿ ಹಿರಿಯ ಕಿರಿಯಾದಿಯಾಗಿ ಎಲ್ಲರೂ ಭಾಗವಹಿಸಿ ಜ್ಞಾನದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಪರಂಪರೆಗೆ ಬೆಳಗನ್ನು ತಂದರು.
ಈ ಹಬ್ಬವು ಸಮುದಾಯಕ್ಕೆ ದೊಡ್ಡ ಹಬ್ಬವಾಗಿದ್ದು, ಜೀವನೋಪಾಯ ನಿಮಿತ್ತ ವಿವಿಧ ಪ್ರದೇಶಗಳಿಗೆ ವಲಸೆ ಹೋಗಿರುವವರು, ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ತಪ್ಪದೆ ಸ್ವಗ್ರಾಮ ತಾಂಡಗಳಿಗೆ ಆಗಮಿಸಿ ಒಂದುಗೂಡಿ ಸಾಮೂಹಿಕ ಹಬ್ಬ ಆಚರಣೆ ಮಾಡುತ್ತಿದ್ದುದ್ದು ಕಂಡುಬಂದಿತು.
ಹಬ್ಬ ಆಚರಣೆಯ ದಿರುಸು:
ಆಧುನಿಕತೆಯ ವ್ಯಾಮೋಹದ ನಡುವೆಯೂ ಲಂಬಾಣಿ ದಿರುಸುಗಳು ಯುವತಿಯರನ್ನು ಆಕರ್ಷಿಸುತ್ತವೆ.
ತಾಂಡಾದಲ್ಲಿನ ಹಿರಿಯ ಮಹಿಳೆಯರು ಹಬ್ಬಕ್ಕೆ ಹಲವಾರು ಹಲವಾರು ತಿಂಗಳು ಮುಂಚೆಯಿಂದಲೇ ತಮ್ಮದೇ ಶೈಲಿಯ ಸಾಂಪ್ರದಾಯಿಕ ಬಟ್ಟೆ ಕಸೂತಿ ಕೆಲಸವನ್ನು ಪ್ರಾರಂಭಿಸಿ ತಯಾರಿಸಿ ಕಿರಿಯರಿಗೆ ಅವುಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಜೊತೆಗೆ ಒಂದು ತಿಂಗಳ ಮುಂಚಿತವಾಗಿಯೇ ಯುವಕ ಯುವತಿಯರಿಗೆ ನೃತ್ಯ ಹಾಡುಗಳ ತರಬೇತಿ ನೀಡುತ್ತಾರೆ.
ದೀಪಾವಳಿ ಆರಂಭಕ್ಕೂ 9 ದಿನಗಳ ಮುಂಚೆಯೇ ಪ್ರತಿದಿನ ಸಂಜೆ ದೇವಸ್ಥಾನದ ಬಳಿ ಲಂಬಾಣಿ ಯುವತಿಯರು ನೃತ್ಯ ಮಾಡುತ್ತಾರೆ. ಆದಾಗಿ ಹಬ್ಬದಲ್ಲಿ ಯುವತಿಯರು ನೂತನ ಸಂಪ್ರದಾಯಿಕ ಉಡುಪಗಳನ್ನು ತೊಟ್ಟು ಹಾಡು ನೃತ್ಯಗಳೊಂದಿಗೆ ಸಂಭ್ರಮಿಸಿದರು. ಪ್ರತಿ ತಾಂಡದ ಸೇವಾಲಾಲ್ ದೇವಾಲಯಗಳ ಬಳಿ ಮಹಿಳೆಯರ ಹಬ್ಬದ ಹಾಡುಗಾರಿಕೆ, ನೃತ್ಯ ಝಲಕ್ ಕಂಡುಬಂದಿತು.
ಸೊಳೋಯ್ ನೊಂದಿಗೆ ಹಬ್ಬ ಆರಂಭ:
ಅಮಾವಾಸ್ಯೆಯ ಬೆಳಿಗ್ಗೆ ಗ್ರಾಮದ ಪ್ರಮುಖರಿಂದ ಸೊಳೋಯ್ ಪ್ರಸಾದವನ್ನು ತಯಾರಿಸಿ ಹಂಚುವ ಮೂಲಕ ಲಂಬಾಣಿಗರ ದೀಪಾವಳಿ ಹಬ್ಬ ಆರಂಭಗೊಂಡಿತು.
ಮನೆ ಮನೆ ಬೆಳಗು:
ಸಂಜೆ ಯುವತಿಯರು ನೂತನ ಹಣತೆಗಳನ್ನು ಮತ್ತು ನವದಾನ್ಯಗಳ ಮೊಳಕೆಯ ಬುಟ್ಟಿಯ ತೀಸ್ ನ್ನು ಹಿಡಿದು ಸೇವಾಲಾಲ್ ದೇವರ ಮುಂದೆ ಬೆಳಗಿದರು. ನಂತರ ಗ್ರಾಮದ ಪ್ರತಿ ಮನೆಗೆ ಹೋಗಿ ಎಲ್ಲರಿಗೂ ಸುಖ ಸಂತೋಷ ಸಂಪತ್ತು ಸಿಗಲಿ ಎಂಬ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಶುಭಕೋರಿ ಹಿರಿಯರಿಂದ ಆಶೀರ್ವಾದ ಪಡೆದು ಬಂದರು. ಈ ಸಂದರ್ಭದಲ್ಲಿ ಹಿರಿಯರು ಯುವತಿಯರಿಗೆ ಕಾಣಿಕೆಗಳನ್ನು ನೀಡಿದರು. ದೀಪಾವಳಿಯ ದಿನದಂದು ಪ್ರತಿ ಮನೆಗಳಿಗೆ ತೆರಳಿ ದೀಪ ಹಚ್ಚುವುದು ಹಬ್ಬದ ಒಂದು ಸಂಪ್ರದಾಯವಾಗಿ ಕಂಡುಬಂತು.
ಪಾಡ್ಯದ ಆಚರಣೆ:
ಪಾಡ್ಯದ ಬೆಳಿಗ್ಗೆ ಯುವತಿಯರು ಬೆಟ್ಟ ಗುಡ್ಡ ಬಯಲು ಪ್ರದೇಶಕ್ಕೆ ಹೋಗಿ ಲಕ್ಷ್ಮಿ ಸ್ವರೂಪವಾದ ತಂಗಡೆ ಗಿಡದ ಹೂವುಗಳನ್ನು ಕಿತ್ತುತಂದು ಪ್ರತಿಮನೆಗೆ ಹೋಗಿ ಬಾಗಿಲು ಮತ್ತು ರಂಗೋಲಿಗೆ ಹೂವುಗಳನ್ನು ಹಾಕುವ ಮೂಲಕ ಶುಭಕೋರಿದರು. ಈ ವೇಳೆ ಮಹಿಳೆಯರು ಯುವತಿಯರಿಗೆ ಅಕ್ಕಿಬೆಲ್ಲ ನೀಡಿ ಗೌರವಿಸಿದರು.
ನಂತರ ಗ್ರಾಮದಲ್ಲಿ ವಾಸಿಸುವ ಪ್ರತಿ ಕುಲದ ಕುಟುಂಬಗಳ ಸದಸ್ಯರು ಒಂದೊಂದು ಕಡೆ ಸೇರಿ ಬೆಂಕಿಯ ಕೆಂಡಗಳನ್ನು ತಯಾರಿಸಿ, ಈಗಾಗಲೇ ತಯಾರಿಸಿಟ್ಟ ತಂಬಿಟ್ಟಿನ ಒಂದೊಂದು ಚೂರನ್ನು ತೆಗೆದುಕೊಂಡು ಕುಲದಲ್ಲಿ ಮರಣಿಸಿದವರ ಹೆಸರನ್ನು ಹೇಳುತ್ತಾ ತುಪ್ಪದೊಂದಿಗೆ ಬೆಂಕಿಯ ಕೆಂಡದಲ್ಲಿ ಹಾಕುತ್ತ ಅವರ ಆತ್ಮ ಶಾಂತಿಸಲಿ ಎಂದು ಕೋರಿದರು. ಹಾಗೂ ಕುಲದೇವರ ಆರಾಧನೆ ನೆರವೇರಿತು.
ಎರಡು ದಿನಗಳ ಸಂಜೆ ಮತ್ತು ರಾತ್ರಿ ವೇಳೆ ಯುವಕ ಯುವತಿಯರು ಮತ್ತು ಹಿರಿಯರು ಸಾಂಪ್ರದಾಯಿಕ ಉಡುಪುಗಳೊಂದಿಗೆ ನೃತ್ಯ ಗಾಯನದೊಂದಿಗೆ ಸಂಭ್ರಮಿಸಿದರು. ಕೊನೆಗೆ ತೀಜ್ ಗಳನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಮರ್ಜನ ಮಾಡಿ ಪ್ರಸಾದವನ್ನು ಸ್ವೀಕರಿಸುವ ಮೂಲಕ ಹಬ್ಬವನ್ನು ಕೊನೆಗೊಳಿಸಿದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q