ಬೀದರ್: ರಾಜ್ಯದಲ್ಲಿ ಸೂರ್ಯನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಸಿಲಿನ ತಾಪಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್ ಅಹ್ಮದ್ (20) ಮೃತಪಟ್ಟ ದುರ್ದೈವಿ. ಸಮೀರ್ ಅಹ್ಮದ್ ಪಟ್ಟಣದ ಡಿಗ್ಗಿ ರಸ್ತೆ ಬಳಿ ತರಕಾರಿ ತರಲು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ತರಕಾರಿ ತರಲು ಹೋಗಿದ್ದಾಗ ಅತಿಯಾದ ಬಿಸಿಲಿನಿಂದಾಗಿ ಸಮೀರ್‌ಗೆ ತಲೆತಿರುಗಿದಂತಾಗಿದೆ. ಕೂಡಲೇ ಆತ ಸಮೀಪದಲ್ಲಿದ್ದ ಮೆಕಾನಿಕ್ ಅಂಗಡಿಯೊಂದಕ್ಕೆ ತೆರಳಿ ನೀರು ಕುಡಿದು ಸ್ವಲ್ಪ ಸಮಯ ವಿಶ್ರಾಂತಿ ಪಡೆದಿದ್ದಾನೆ. ವಿಶ್ರಾಂತಿಯ ನಂತರ ಮರಳಿ ಮನೆಗೆ ಹೋಗುತ್ತಿದ್ದಾಗ, ಡಿಗ್ಗಿ ಗ್ರಾಮದ ರಸ್ತೆ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
“ನನ್ನ ಮಗ ಅತಿಯಾದ ಬಿಸಿಲಿನ ಝಳ ತಾಳಲಾರದೆ ಸಾವನ್ನಪ್ಪಿದ್ದಾನೆ” ಎಂದು ಮೃತನ ತಂದೆ ಲಯಿಕ್ ಅಹ್ಮದ್ ಗೋಳಾಡಿದ್ದಾರೆ. ಮಗನ ಸಾವಿಗೆ ಬಿಸಿಲೇ ಕಾರಣ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಕಮಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ಏರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


