ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ತುರುವೇಕೆರೆ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಯುವ ಜನಾಕ್ರೋಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಆಗಮಿಸಿದ್ದರು.
ಪ್ರವಾಸಿ ಮಂದಿರದ ಬಳಿ ಸಾವಿರಾರು ಸಂಖ್ಯೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಗರು ನಲಪಾಡ್ ಅವರನ್ನು ಸ್ವಾಗತಿಸಿದರು. ಬಳಿಕ ನೂರಾರು ಸಂಖ್ಯೆಯ ಬೈಕ್ ರ್ಯಾಲಿಯ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಕಾಂಗ್ರೆಸ್ ರಾಷ್ಟ್ರ ನಾಯಕರ ಹಾಗೂ ರಾಜ್ಯ ನಾಯಕರುಗಳ ಪರ ಘೋಷಣೆ ಕೂಗಿದರು.
ಬಳಿಕ ಚೌದ್ರಿ ಕನ್ವೆನ್ಷನ್ ಹಾಲ್ ನಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಮ್ಮದ್ ಹ್ಯಾರಿಸ್ ನಲಪಾಡ್, ಮುಂಬರುವ 2023ನೇ ಚುನಾವಣೆಯಲ್ಲಿ ಮತದಾರ ಪ್ರಭುಗಳು, ಬಿಜೆಪಿಯನ್ನು ಕಡೆಗಣಿಸುತ್ತಾರೆ. ಕಳೆದ 8 ವರ್ಷಗಳಿಂದ ಕೇಂದ್ರ ಸರ್ಕಾರ ದೇಶದ ಜನರಿಗೆ ಮೋಸ ಮಾಡುತ್ತಿದೆ. ಬಡವರು ಬಡವರಾಗಿ ಉಳಿದಿದ್ದಾರೆ, ನಿರುದ್ಯೋಗ ಸಮಸ್ಯೆ ಇನ್ನೂ ಹೆಚ್ಚಾಗುತ್ತಾ ಹೋಗುತ್ತಿದೆ. ರೈತರ ಕಷ್ಟ ಹೇಳತೀರದಾಗಿದೆ. ಸಾಮಾನ್ಯರು ಜನಜೀವನ ನಡೆಸಲು ಕಷ್ಟಕರವಾಗಿದೆ. ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುತ್ತಾ ಬರುತ್ತಿದ್ದಾರೆ. ಡೀಸೆಲ್ ಪೆಟ್ರೋಲ್ ದರಗಳು ಗಗನಕ್ಕೇರಿದೆ ಅಚ್ಚೆ ದಿನದ ಭರವಸೆ ನೀಡಿದ್ದ ದೇಶದ ಪ್ರಧಾನಿಗಳು ಜನರಿಗೆ ಬರೆಯನ್ನು ಹಾಕುತ್ತಾ ಬಂದಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿ ಹಾಯ್ದರು.
ಈ ಕಾರ್ಯಕ್ರಮದಲ್ಲಿ ಎಐಸಿಸಿ ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ , ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ರಾಮಕೃಷ್ಣ, ತಾಲೂಕು ಯುವ ಘಟಕದ ಅಧ್ಯಕ್ಷ ವಿನಯ್, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುರಾಜ್, ಶ್ರೀಮತಿ ಗೀತಾ ರಾಜಣ್ಣ, ಶ್ರೀಮತಿ ಕಮಲ ಸ್ವರ್ಣ ಕುಮಾರ್, ಚೌದ್ರಿ ಟಿ. ರಂಗಪ್ಪ, ಬಿ.ಎಸ್ ವಸಂತ್ ಕುಮಾರ್, ರಾಜಣ್ಣ ಗುಡ್ಡೇನಹಳ್ಳಿ , ಮಂಜುನಾಥ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜು ಮುಂತಾದ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಪಕ್ಷದ ಬೆಂಬಲಿಗರು ಹಾಜರಿದ್ದರು.
ವರದಿ: ಸುರೇಶ ಬಾಬು, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz