ಚೇಳೂರು: ಗ್ರಾಮದಲ್ಲಿ ಮಳೆಯ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ಇಲ್ಲದೇ, ಕಸಗಳು ಬೇಕಾಬಿಟ್ಟಿಯಾಗಿ ಸಂಗ್ರಹಗೊಂಡಿದೆ. ಆದರೆ ಗ್ರಾಮ ಪಂಚಾಯತ್ ಇದನ್ನು ನೋಡಿಯೋ ನೋಡದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು.
ಮೊನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಗ್ರಾಮದಿಂದ ಹೊರಗೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ಕಸದ ರಾಶಿ ಬಿದ್ದಿದೆ. ಇದರಿಂದಾಗಿ ಜನರು ರಸ್ತೆಯಲ್ಲಿ ಓಡಾಡಲೂ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ತಾಲೂಕು ವೀಕ್ಷಣೆಗೆ ಆಗಮಿಸಿದ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಯ್ಯನವರನ್ನು ತರಾಟೆಗೆತ್ತಿಕೊಂಡ ಗ್ರಾಮಸ್ಥರು, ನಿಮಗೆ ಗ್ರಾಮದ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ, ನೀವು ಕೈಲಾಗದಿದ್ದರೆ ಗ್ರಾಮ ಪಂಚಾಯತ್ ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ನರಸಿಂಹಯ್ಯನವರು ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದರೂ ಗ್ರಾಮಸ್ಥರ ಆಕ್ರೋಶ ಇಳಿಯಲಿಲ್ಲ. ಕೊನೆಗೆ ಪಿಡಿಓ, ಅಧ್ಯಕ್ಷರ ಜೊತೆಗೆ ಚರ್ಚಿಸಿ ಕೂಡಲೇ ಚರಂಡಿ ಸ್ವಚ್ಛಗೊಳಿಸಲು ತಿಳಿಸುತ್ತೇನೆ ಎಂದು ಭರವಸೆ ನೀಡಿದಾಗ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದುಕೊಂಡರು.
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ