ಸರಗೂರು: ತಾಲ್ಲೂಕಿನ ನುಗು ಜಲಾಶಯದ ಹಿನ್ನೀರಿನಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಮೀನುಗಾರಿಕಾ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಅಕ್ರಮವಾಗಿ ಮೀನು ಹಿಡಿಯಲಾಗುತ್ತಿದೆ. ಈ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನುಗು ಜಲಾಶಯದ ಮೀನಾಪಾಶುವಾರು ಹಕ್ಕಿನ ವಿಲೇವಾರಿ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು, ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೂ ಮೀನುಗಾರಿಕೆ ನಡೆಸುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ, ಸೆಪ್ಟಂಬರ್ 1ರಂದು ಸಂಜೆ ಸುಮಾರು 30 ದೋಣಿಗಳಲ್ಲಿ ಬಲೆ ಹಾಕಿರುವ ಆರೋಪಿಗಳು, ಸೆಪ್ಟಂಬರ್ 2ರಂದು ಬರೋಬ್ಬರಿ 3 ಟನ್ ನಷ್ಟು ಮೀನುಗಳನ್ನು ರಾಜಾರೋಷವಾಗಿ ಹಿಡಿದು ಸಾಗಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನ್ಯಾಯಾಲಯದ ಆದೇಶ ಧಿಕ್ಕರಿ ಮೀನು ಹಿಡಿಯುತ್ತಿರುವುದನ್ನು ಕಂಡು ವಿಚಾರಿಸಲು ಹೋದವರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಇಷ್ಟೆಲ್ಲ ನಡೆದರೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ತಮಗೇನೂ ಗೊತ್ತಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಇಲಾಖೆಯವರು ಮೌಖಿಕವಾಗಿ ಮೀನು ಹಿಡಿಯಲು ತಿಳಿಸಿರುವುದರಿಂದಾಗಿ ಮೀನು ಹಿಡಿದ್ದೇವೆ ಎಂದು ಗ್ರಾಮಸ್ಥರು ವಿಚಾರಿಸಿದ ವೇಳೆ ತಂಡದ ವ್ಯಕ್ತಿಯೋರ್ವ ಹೇಳಿದ್ದಾನೆ ಎಂದು ಎನ್ನಲಾಗಿದೆ. ಘಟನೆ ಸಂಬಂಧ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ವರದಿ: ಚಂದ್ರು ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz