ಪ್ರತಿ ವರ್ಷ ಡಿಸೆಂಬರ್ 9 ರಂದು ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶವೇ ಭ್ರಷ್ಟಾಚಾರದ ವಿರುದ್ಧವಾಗಿ ಜಾಗೃತಿ ಮೂಡಿಸುವುದು ಮತ್ತು ಸಮರ್ಥ, ಪಾರದರ್ಶಕ ಆಡಳಿತವನ್ನು ಉತ್ತೇಜಿಸುವುದು.
ಭ್ರಷ್ಟಾಚಾರವು ಯಾವುದೇ ದೇಶದ ಅಭಿವೃದ್ಧಿಗೆ ದೊಡ್ಡ ಅಡಚಣೆ. ಇದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಯನ್ನು ಹಿಮ್ಮುಖಗೊಳಿಸುವ ಕ್ರಿಯೆಯಾಗಿದ್ದು, ಅಸಮಾನತೆ, ದಾರಿದ್ರ್ಯ, ಮತ್ತು ನ್ಯಾಯದ ಕೊರತೆಯನ್ನು ಹೆಚ್ಚಿಸುತ್ತದೆ. ಭಾರತದಂಥ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಭ್ರಷ್ಟಾಚಾರದ ಪ್ರಭಾವವನ್ನು ಕಡಿಮೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗುತ್ತದೆ.
ತುಮಕೂರಿನಂತಹ ಪ್ರಗತಿಶೀಲ ಜಿಲ್ಲೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ನಮ್ಮತುಮಕೂರು ಮಾಧ್ಯಮ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.
ಭ್ರಷ್ಟಾಚಾರ ನಿರ್ಮೂಲನೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾದಾಗ, ಅದರ ನಿರ್ಮೂಲನೆ ಸಾಧ್ಯವಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಲಂಚಕೊಡುವುದಿಲ್ಲ ಎನ್ನುವ ಪ್ರತಿಜ್ಞೆಯನ್ನ ನಾಗರಿಕರು ಮಾಡಬೇಕಿದೆ. ಜೊತೆಗೆ ಅಧಿಕಾರಿಗಳು ಕೂಡ ಲಂಚ ಸ್ವೀಕರಿಸದೇ ನಾಗರಿಕರ ಕೆಲಸಗಳನ್ನ ಮಾಡಿಕೊಡುತ್ತೇವೆ ಎನ್ನುವ ಪ್ರತಿಜ್ಞೆ ಮಾಡಬೇಕಿದೆ.
ಶಾಲಾ ಕಾಲೇಜು ಮಟ್ಟದಲ್ಲಿ ಭ್ರಷ್ಟಾಚಾರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಿದೆ. ಯಾವ ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕಾರ ಮಾಡುತ್ತಾರೋ, ಅಂತಹವರನ್ನು ಮಟ್ಟ ಹಾಕಲು ದೂರು ಸಲ್ಲಿಸುವುದು ಹೇಗೆ ಎನ್ನುವುದರ ಮಾಹಿತಿಯನ್ನ ನಾಗಕರಿಕರಿಗೆ ನೀಡುವುದು ಅವಶ್ಯಕವಾಗಿದೆ.
ಲಂಚ ಕೇಳುವುದು ಮತ್ತು ಲಂಚ ನೀಡುವುದು ಅಪರಾಧ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಬೇಕಿದೆ. ನಾಗರಿಕರ ಸೇವೆಗಾಗಿ ಅಧಿಕಾರಿಗಳು ಇರುವುದೇ ಹೊರತು, ಅವರು ನಮ್ಮ ಧನಿಕರಲ್ಲ, ನಮ್ಮ ತೆರಿಗೆ ಹಣದಿಂದ ಅಧಿಕಾರಿಗಳಿಗೆ ವೇತನ ನೀಡಲಾಗುತ್ತದೆ ಎನ್ನುವ ವಾಸ್ತವ ಅಂಶಗಳನ್ನು ಜನರಿಗೆ ಮನದಟ್ಟು ಮಾಡಬೇಕಿದೆ.
ಜನರನ್ನು ಜಾಗೃತಿ ಗೊಳಿಸುವುದೇ ಭ್ರಷ್ಟಾಚಾರದ ವಿರುದ್ಧದ ಪ್ರಬಲ ಹೋರಾಟವಾಗಿದೆ. ಜನರಿಗೆ ಕಾನೂನಿನ ಅರಿವು ನೀಡಬೇಕು. ಭ್ರಷ್ಟಾಚಾರ ಎಂಬ ದೊಡ್ಡ ಪಿಡುಗನ್ನು ಬಗ್ಗುಬಡಿಯಲು ಲೋಕಾಯುಕ್ತದಂತಹ ಸಂಸ್ಥೆಗಳಿಗೆ ದೂರು ನೀಡುವ ಬಗ್ಗೆ ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ.
ನಾವೆಲ್ಲರೂ ಒಂದಾಗಿ ಭ್ರಷ್ಟಾಚಾರ ಮುಕ್ತ ದೇಶವನ್ನು ನಿರ್ಮಿಸೋಣ ಎಂಬ ಉದಾತ್ತ ಮನೋಭಾವನೆ ಹೊಂದಿ, ಈ ದಿನವನ್ನು ಅರ್ಥಪೂರ್ಣಗೊಳಿಸೋಣ. ನಮ್ಮ ತುಮಕೂರು ನಿಮ್ಮೊಂದಿಗೆ ಈ ಹೋರಾಟದಲ್ಲಿ ಸದಾ ನಿಂತಿರುತ್ತದೆ.
— ಜಿ.ಎಲ್. ನಟರಾಜು,
ಸಂಪಾದಕರು, ನಮ್ಮ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx