ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ತುಂಬಿಸುವ ₹135.30 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಅಕ್ಟೋಬರ್ 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ, ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಹೋಬಳಿಯ ಜನತೆ ಗೌರವ ಸಲ್ಲಿಸಿ ಅಭಿನಂದಿಸಿದರು.
ಎತ್ತಿನಹೊಳೆ ಗುರುತ್ವಾಕರ್ಷಣೆ ಕಾಲುವೆಯ ಸರಪಳಿ 219 ಕಿ.ಮೀ. ವ್ಯಾಪ್ತಿಯಲ್ಲಿ ಮಧುಗಿರಿ ಫೀಡರ್ ಅಡಿಯಲ್ಲಿ ದೊಡ್ಡೇರಿ ಹೋಬಳಿಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿರುವುದು ಈ ಭಾಗದ ನೀರಾವರಿ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಶಾಸಕ ಕೆ.ಎನ್.ರಾಜಣ್ಣ ಅವರ ಸ್ವಗೃಹಕ್ಕೆ ತೆರಳಿ ಗೌರವ ಸಲ್ಲಿಸಿದರು. ಈ ವೇಳೆ ‘ನೀರಾವರಿ ಭಗೀರಥ’ ಎಂದು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಈ ಯೋಜನೆಯಿಂದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಳ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬ ಆಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದರು. ಈ ಮಹತ್ವದ ಯೋಜನೆಗೆ ಶ್ರಮಿಸಿದ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಹರ್ಷ ಕುರುಬರಹಳ್ಳಿ, “ಒಂದು ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಕೈಗಾರಿಕೆಗಳು ಅಥವಾ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ಎತ್ತಿನಹೊಳೆ ಯೋಜನೆಯಡಿ ದೊಡ್ಡೇರಿ ಹೋಬಳಿಯ ಕೆರೆಗಳಿಗೆ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರಕಿಸಿಕೊಡುವಲ್ಲಿ ಶಾಸಕ ಕೆ.ಎನ್.ರಾಜಣ್ಣ ಅವರ ಪ್ರಯತ್ನ ಮಹತ್ವದ್ದಾಗಿದೆ. ಅವರು ನಿಜವಾದ ರೈತಬಂಧುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು.
“ಭೂಮಿಯನ್ನೇ ನಂಬಿ ಕೃಷಿ ಮಾಡುವ ರೈತರಿಗೆ ಕಾಲಕಾಲಕ್ಕೆ ನೀರು, ವಿದ್ಯುತ್ ಹಾಗೂ ಶಿಕ್ಷಣದಂತಹ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಕೆ.ಎನ್.ರಾಜಣ್ಣ ಅವರು ಸದಾ ಮುಂಚೂಣಿಯಲ್ಲಿದ್ದಾರೆ. ಕೇವಲ ಮಾತುಗಳಿಗೆ ಸೀಮಿತವಾಗದೆ, ಕೆಲಸದ ಮೂಲಕ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ. ಇಂತಹ ಜನಪರ ನಾಯಕರು ಮುಂದೆಯೂ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ದೊಡ್ಡೇರಿ ಹೋಬಳಿಯ ಜನರ ಬಹುದಿನಗಳ ನಿರೀಕ್ಷೆಯಾಗಿರುವ ಈ ನೀರಾವರಿ ಯೋಜನೆ ಸಾಕಾರಗೊಳ್ಳುವ ಮೂಲಕ ರೈತರ ಬದುಕಿನಲ್ಲಿ ಹೊಸ ಭರವಸೆ ಮೂಡಲಿ ಎಂಬ ಆಶಯದಿಂದ ಪಕ್ಷಾತೀತವಾಗಿ ಮುಖಂಡರು ಹಾಗೂ ಸಾರ್ವಜನಿಕರು ಸೇರಿ ಅವರಿಗೆ ಗೌರವ ಸಲ್ಲಿಸಿದ್ದೇವೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ತುಂಗೋಟಿ ರಾಮಣ್ಣ ಸೇರಿದಂತೆ ಹೋಬಳಿಯ ನೂರಾರು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
