ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಮೃತದೇಹ ಪತ್ತೆಯಾಗಿದ್ದು, ಜನತೆಯನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯ ಪಾಂಡವಪುರ ಟೌನ್ ಪೊಲೀಸ್ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಒಂದೇ ದಿನ ಬೇರೆ ಬೇರೆ ಕಡೆ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಮೃತ ದೇಹ ಪತ್ತೆಯಾಗಿವೆ.
ಪಾಂಡವಪುರ ತಾಲೂಕಿನ ಬೇಬಿ ಕೆರೆಯ ನಾಲೆಯಲ್ಲಿ 30 ರಿಂದ 35 ವರ್ಷ ಪ್ರಾಯದ ಮಹಿಳೆಯ ಅರ್ಧ ಕತ್ತರಿಸಿದ ಶವ ಪತ್ತೆಯಾಗಿದೆ. ಮತ್ತೊಂದು ಮಹಿಳೆಯ ಶವ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರೆಕೆರೆ ಗ್ರಾಮದ ಬಳಿಯ ಸಿಡಿಎಸ್ ನಾಲೆಯಲ್ಲಿ ತೇಲಿ ಬಂದು ರೈತನ ಜಮೀನಿನಲ್ಲಿ ಸಿಕ್ಕಿದೆ. ಪತ್ತೆಯಾದ ಎರಡು ಶವಗಳ ಅರ್ಧ ಭಾಗವನ್ನು ಕತ್ತರಿಸಿ ಚೀಲದಲ್ಲಿ ಹಾಕಿ ಎರಡು ಕಾಲುಗಳನ್ನು ಕಟ್ಟಿ ನೀರಿಗೆ ಬಿಸಾಡಿದ್ದಾರೆ.
ಇನ್ನು ಎರಡು ಕಡೆ ಪ್ರತ್ಯೇಕವಾಗಿ ದೇಹದ ಅರ್ಧಭಾಗ ಪತ್ತೆಯಾಗಿರುವ ಸುದ್ದಿ ತಿಳಿದು ಪಾಂಡವಪುರ ಹಾಗೂ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡು ಕಡೆ ಸಿಕ್ಕಿರುವ ಅರ್ಧ ಕತ್ತರಿಸುವ ಮೃತದೇಹಗಳ ಹೊಟ್ಟೆ ಕೆಳಗಿನ ಭಾಗ ಮಾತ್ರ ಈಗ ಪತ್ತೆಯಾಗಿದೆ. ಹೊಟ್ಟೆ ಮೇಲ್ಭಾಗ ನಾಪತ್ತೆಯಾಗಿದೆ. ಸಿಕ್ಕಿರುವ ಎರಡು ಶವಗಳ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದ್ದು, ಬೇರೆಲ್ಲೋ ಕೊಲೆ ಮಾಡಿ ಬಳಿಕ ದೇಹ ಕತ್ತರಿಸಿ ಸಾಕ್ಷ್ಯ ನಾಶಕ್ಕೆ ದುಷ್ಕರ್ಮಿಗಳು ಯತ್ನಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೇ, ಈ ಎರಡು ಶವಗಳ ಉಳಿದ ಅರ್ಧ ದೇಹದ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಇನ್ನು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಕತ್ತರಿಸಿದ ದೇಹ ಪತ್ತೆಯಾದ ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ತಮ್ಮ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಪತ್ತೆಯಾಗಿರುವ ಈ ಇಬ್ಬರು ಮಹಿಳೆಯರ ಬಗ್ಗೆ ಮಾಹಿತಿ ಕಲೆ ಹಾಕಿ ಈ ಪ್ರಕರಣ ಭೇದಿಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದಾರೆ.
ಪ್ರಕರಣ ಭೇದಿಸಲು 7 ಪ್ರತ್ಯೇಕ ತಂಡಗಳ ರಚನೆ ಮಾಡಲಾಗಿದೆ. ಎಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಮತ್ತೊಂದೆಡೆ ನಾಪತ್ತೆಯ ದೂರಿನ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಎಸ್ಪಿ ವೇಣುಗೋಪಾಲ್ ಹೇಳಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


