ಬೆಂಗಳೂರು: ಮೊಬೈಲ್ ಫೋನ್ ಲೌಡ್ ಸ್ಪೀಕರ್ ಹಾಕಿದ ವಿಚಾರಕ್ಕೆ ಪತ್ನಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾಗಣಪತಿನಗರ ನಿವಾಸಿ ಲೋಕೇಶ್ ಕುಮಾರ್ ಗೆಹಲೋಟ್ (43) ಬಂಧಿತ. ಈತ ಏ.24ರಂದು ಸಂಜೆ ಸುಮಾರು 6 ಗಂಟೆಗೆ ಪತ್ನಿ ನಮಿತಾ ಸಾಹು (43) ಜತೆಗೆ ಜಗಳ ತೆಗೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ರಾಜಸ್ಥಾನ ಮೂಲದ ಲೋಕೇಶ್ ಕಬ್ಬನ್ಪೇಟೆಯಲ್ಲಿ ಫೋಟೋ ಸ್ಟುಡಿಯೋ ನಡೆಸುತ್ತಿದ್ದ. ಐದು ವರ್ಷಗಳ ಹಿಂದೆ ನಮಿತಾ ಸಾಹುರನ್ನು ಮದುವೆ ಆಗಿದ್ದ. ದಂಪತಿಗೆ 3 ವರ್ಷದ ಹೆಣ್ಣು ಮಗುವಿದ್ದು, ಬಸವೇಶ್ವರನಗರದ ಮಹಾಗಣಪತಿ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.
ಆರೋಪಿ ಲೋಕೇಶ್ ಏ.24ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ಈ ವೇಳೆ ಪತ್ನಿಯ ಅಣ್ಣ ಸತ್ಯಂ, ಲೋಕೇಶ್ ಮೊಬೈಲ್ ಗೆ ಕರೆ ಮಾಡಿದ್ದರಿಂದ ಆತನೊಂದಿಗೆ ಮಾತನಾಡುತ್ತಿದ್ದ. ಆಗ ಪತ್ನಿ ನಮಿತಾ ಯಾರು ಕರೆ ಮಾಡಿರುವುದು ಎಂದು ಕೇಳಿದ್ದಾರೆ.
ಅದಕ್ಕೆ ನಿಮ್ಮ ಅಣ್ಣ ಎಂದು ಲೋಕೇಶ್ ಹೇಳಿದ್ದಾನೆ. ಹಾಗಾದರೆ, ಲೌಡ್ ಸ್ಪೀಕರ್ ಹಾಕಿಕೊಂಡು ಮಾತನಾಡಿ ಎಂದು ನಮಿತಾ ಹೇಳಿದ್ದಾಳೆ ಅಷ್ಟಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಲೋಕೇಶ್ ರೊಚ್ಚಿಗೆದ್ದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ನೆಲಕ್ಕೆ ಕೆಡವಿ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————