ಬೆಂಗಳೂರು: ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಫೈವ್ ಸ್ಟಾರ್ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ನಡೆಸಿದ್ದು, ಪಾರ್ಟಿಯಲ್ಲಿ ತೊಡಗಿದ್ದ ಒಟ್ಟು 50 ಜನರನ್ನ ವಶಕ್ಕೆ ಪಡೆದಿದ್ದಾರೆ.
ಇವರಲ್ಲಿ ರಾಜಕೀಯ ನಾಯಕರ ಮಕ್ಕಳು ಸಹ ಪಾರ್ಟಿಯಲ್ಲಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಅನುಮಾನ ಹಿನ್ನೆಲೆ ಜಿಟಿ ಮಾಲ್ ಮುಂಭಾಗದಲ್ಲಿರುವ ಫೈವ್ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಲಾಗಿದೆ. ಎಂ.ಜಿ ರಸ್ತೆಯ ಟ್ರಿನಿಟಿ ಸರ್ಕಲ್ ನಲ್ಲಿರುವ ಪ್ರತಿಷ್ಠಿತ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ಮಾಡಿದ್ದಾರೆ.
ವಶಕ್ಕೆ ಪಡೆದಿದ್ದ 50 ಜನರ ಪೈಕಿ 35 ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದು, ಐವರು ಮಾದಕವಸ್ತು ಸೇವನೆ ಮಾಡಿರೋದು ದೃಢವಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ಪಾರ್ಟಿಯಲ್ಲಿ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಸಹ ಇರುವುದು ಖಚಿತವಾಗಿದೆ. ಈ ಪರಿಣಾಮ ಸಿದ್ಧಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ಧಾಂತ್ ಹೋಟೆಲ್‍ನಲ್ಲಿ ಡಿಜೆ ಪ್ಲೈಯರ್ ಆಗಿದ್ದು, ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ ಎಂದು ಹೇಳಲಾಗ್ತಿದೆ. ಇವರ ವೈದ್ಯಕೀಯ ಪರೀಕ್ಷೆ ವೇಳೆ ರಕ್ತದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಹಲಸೂರು ಇನ್ ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದರು. ವಶಕ್ಕೆ ಪಡೆದಿದ್ದ ಯುವಕ, ಯುವತಿಯರನ್ನು ಮೂರು ಟಿಟಿ ವಾಹನದಲ್ಲಿ ಮೆಡಿಕಲ್ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಈ ಹಿಂದೆ ಡ್ರಗ್ಸ್ ಜಾಲದಲ್ಲಿ ಸಿದ್ದಾಂತ್ ಕಪೂರ್ ಸಹೋದರಿ, ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹೆಸರು ಕೇಳಿ ಬಂದಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ತನಿಖೆ ವೇಳೆ ಶ್ರದ್ಧಾ ಕಪೂರ್, ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ ಅವರಿಗೆ ಎನ್ ಸಿಬಿ ನೋಟಿಸ್ ನೀಡಲಾಗಿತ್ತು. ಈ ವೇಳೆ ಶ್ರದ್ಧಾ ಕಪೂರ್ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


