ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಾಲ್ಕನೇ ಅಲೆಯ ಭೀತಿಯ ನಡುವೆ ಸಾರ್ವಜನಿಕ ಪ್ರದೇಶಗಳಲ್ಲಿ “ಮಾಸ್ಕ್” ಧರಿಸುವಿಕೆಯನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ.
ಹೊರಾಂಗಣ ಚಟುವಟಿಕೆ, ಶಾಪಿಂಗ್ ಮಾಲ್,ವಾಣಿಜ್ಯ ಸಂಕೀರ್ಣ, ಬಸ್, ರೈಲ್ವೆ ನಿಲ್ದಾಣಗಳು, ಆಸ್ಪತ್ರೆ, ಶಾಲಾ ಕಾಲೇಜು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇದರ ಮೇಲೆ ನಿಗಾ ಇರಿಸಲು ಬಿಬಿಎಂಪಿ ಮಾರ್ಷಲ್‌ಗಳು ಇಂದಿನಿಂದ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.
ಈ ಕುರಿತು ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್‌ಕುಮಾರ್, ನಾಲ್ಕನೇ ಅಲೆ ಬರುವ ಮುನ್ಸೂಚನೆ ಹಿನ್ನೆಲೆ ಬಿಬಿಎಂಪಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಇಂದಿನಿಂದ ಮಾರ್ಷಲ್‌ಗಳು ಮಾಸ್ಕ್ ಧರಿಸುವ ಕುರಿತು ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದರು.
ಸದ್ಯ ಸರ್ಕಾರದ ನಿರ್ದೇಶನ ಅನ್ವಯ ಮಾಸ್ಕ್ ಸಂಬಂಧ ಯಾವುದೇ ದಂಡವನ್ನು ಪಾಲಿಕೆ ಹಾಕುತ್ತಿಲ್ಲ.ಆದರೆ, ಸಾರ್ವಜನಿಕರು ನಿರ್ಲಕ್ಷ್ಯ ತೋರದೆ, ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಇನ್ನೂ, ನಗರದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚು ಕಡೆಗಳಲ್ಲಿ ಕೋವಿಡ್ ಪರೀಕ್ಷೆ ಅಧಿಕಗೊಳಿಸಲಾಗಿದೆ. ಸದ್ಯ ದಿನಕ್ಕೆ ೧೬ ಸಾವಿರ ಪರೀಕ್ಷೆ ನಡೆಯುತ್ತಿದ್ದು, ಇದರ ಸಂಖ್ಯೆ ಇಪ್ಪತ್ತು ಸಾವಿರ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೋವಿಡ್‌ಗೆ ಮಹಿಳೆ ಬಲಿ:
ಬೆಂಗಳೂರಿನಲ್ಲಿ16 ದಿನಗಳ ಬಳಿಕ ಮತ್ತೆ ಕೊರೋನಾಗೆ 72 ವರ್ಷದ ಮಹಿಳೆ ಬಲಿಯಾಗಿದ್ದಾರೆ. ಕೆಲ ದಿನಗಳಿಂದ ಜ್ವರ ಮತ್ತು ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಾ ಇದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅಲ್ಲದೆ, ಈಗಾಗಲೇ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 300ರ ಸನಿಹಕ್ಕೆ ಬಂದಿದೆ. 300ರ ಸನಿಹಕ್ಕೆ ಬಂದರೂ ಈವರೆಗೂ ಒಂದು ಸಾವು ಕೂಡ ಆಗಿರಲಿಲ್ಲ. ಆದರೆ ದೇಶಾದ್ಯಂತ ಕೇಸ್ ಹೆಚ್ಚಳ ಆಗುತ್ತಿರುವ ಬೆನ್ನಲ್ಲೆ ಬೆಂಗಳೂರಿನಲ್ಲಿ ಸೋಂಕಿಗೆ ಬಲಿಯಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ವರದಿ: ಆಂಟೋನಿ, ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


