ಕೋವಿಡ್ ನಾಲ್ಕನೇ ಅಲೆ ದಿನದಿಂದ ದಿನಕ್ಕೆ ತುಸು ಏರಿಕೆಯಾಗುವ ಮಧ್ಯೆಯೇ ಬೆಂಗಳೂರಿನ ಎರಡು ಶಾಲೆಗಳ ೩೧ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಂಕಿಗೆ ಒಳಗಾಗಿರುವ ಮಕ್ಕಳ ಆರೋಗ್ಯದ ಮೇಲೆ ಬಿಬಿಎಂಪಿ ನಿಗಾ ವಹಿಸುವುದರ ಜತೆಗೆ ಎರಡೂ ಶಾಲೆಗಳನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಷಿ ಶಾಲೆಗೆ ರಜೆ ನೀಡಲಾಗಿದೆ.
ನಗರದ ದಾಸರಹಳ್ಳಿ ವಲಯದ ರಾಜ ಗೋಪಾಲನಗರದಲ್ಲಿರುವ ನ್ಯೂ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಮತ್ತು ಎಂಇಎಸ್ ಪಬ್ಲಿಕ್ ಸ್ಕೂಲ್ ಎರಡು ಖಾಸಗಿ ಶಾಲೆಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.
ನ್ಯೂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ೫ ಮತ್ತು ೬ ನೇ ತರಗತಿಯಲ್ಲಿ ಓದುತ್ತಿದ್ದ ೨೧ ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಎಂಇಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ೫ ನೇ ತರಗತಿಯಲ್ಲಿ ಓದುತ್ತಿದ್ದ ೧೦ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸದ್ಯಕ್ಕೆ ಎಲ್ಲಾ ಮಕ್ಕಳಿಗೂ ಮತ್ತು ಶಾಲಾ ಸಿಬ್ಬಂದಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯ ಶಾಲೆಗಳನ್ನು ಕಂಟೈನ್ಮೆಂಟ್ ಅಂತ ಘೋಷಣೆ ಮಾಡಲಾಗಿದ್ದು, ಕೊರೋನಾ ಪಾಸಿಟಿವ್ ಬಂದಿರುವ ಮಕ್ಕಳೆಲ್ಲರೂ ಕೂಡ ಕ್ಷೇಮವಾಗಿದ್ದು, ಯಾವುದೇ ಆತಂಕ ಪಡುವಂತ ಅಗತ್ಯವಿಲ್ಲ ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ,ಇದೇ ತಿಂಗಳು ಲಸಿಕೆ ಹಾಕಲು ತಂಡ ತೆರಳಿತ್ತು.ಈ ವೇಳೆ ಅನಾರೋಗ್ಯದ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ರ್ಯಾಟ್ ಪರೀಕ್ಷೆ ಮಾಡಿದಾಗ ಕೋವಿಡ್ ದೃಢ ಪಟ್ಟಿದೆ.
ಎರಡೂ ಶಾಲೆಯ ೩೧ ವಿದ್ಯಾರ್ಥಿಗಳಿಗೆ ಕೋವಿಡ್ ಇರೋದು ದೃಢ ಪಟ್ಟಿದೆ. ಉಳಿದ ಹತ್ತು ವಿದ್ಯಾರ್ಥಿಗಳ ವರದಿ ಇನ್ನೂ ಬರಬೇಕಿದೆ. ಕೋವಿಡ್ ಕಾಣಿಸಿಕೊಂಡ ಎರಡು ಶಾಲೆಗಳನ್ನ ಸದ್ಯಕ್ಕೆ ಬಂದ್ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕರಿಗೂ ಕೋವಿಡ್ ಟೆಸ್ಟ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ.ನಗರದ ಎಲ್ಲಾ ಶಾಲೆಗಳಲ್ಲೂ ಕೋವಿಡ್ ನಿಯಮ ಪಾಲನೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮಾರ್ಗಸೂಚಿ ಪಾಲನೆಗೆ ಸೂಚನೆ
ಬೆಂಗಳೂರಿನ ಕೆಲ ಶಾಲೆಗಳಲ್ಲಿ ಕೋವಿಡ್ ಸ್ಫೋಟ ಗೊಂಡಿರುವ ಕಾರಣ ಹಿಂದಿನಂತೆ ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವಂತೆ ಬಿಬಿಎಂಪಿ ಶಾಲೆಗಳಿಗೆ ಸೂಚನೆ ನೀಡಿದೆ.
ಪ್ರತಿಯೊಂದು ಶಾಲೆಯಲ್ಲೂ ಎಸ್‌ಒಪಿ ಪಾಲನೆ ಮಾಡುವಂತೆ ಬಿಬಿಎಂಪಿ ಹೇಳಿದ್ದು, ಮೊದಲಿನಂತೆ ಮಾಸ್ಕ್ ಸ್ಯಾನಿಟೈಜರ್, ಸಾಮಾಜಿ ಅಂತರದ ಜೊತೆಗೆ ಎಲ್ಲಾ ಶಾಲಾ ಕಾಲೇಜುಗಳ ಪ್ರವೇಶ ದ್ವಾರದಲ್ಲಿ ತಾಪ ಪರೀಕ್ಷೆ ಮಾಡುವಂತೆ ಬಿಬಿಎಂಪಿ ಹೇಳಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


