ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಕೋಳಿ ಕತ್ತರಿಸುವ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಸುಧಾ (50) ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. ಪತಿ ಶ್ರೀನಿವಾಸ್ (52) ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.
ಯಲಹಂಕ ತಾಲ್ಲೂಕು ಬೂದಿಗೆರೆ ಹೋಬಳಿ ಸಿಂಗಹಳ್ಳಿ ಗ್ರಾಮದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡು ಆರೋಪಿ ಪತಿ ಶ್ರೀನಿವಾಸ್ ಜೀವನ ಮಾಡಿಕೊಂಡಿದ್ದ.
ಹಲವು ವರ್ಷಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಿದ್ದುದರಿಂದ ಪತಿಯನ್ನು ತೊರೆದು ತನ್ನ ತವರು ಮನೆ ಹೊಸಕೋಟೆಗೆ ಸುಧಾ ಹೋಗಿದ್ದರು.
ಇವರ ಇಬ್ಬರು ಮಕ್ಕಳು ತಾಯಿಯನ್ನು ಸಮಾಧಾನಪಡಿಸಿ ಮನೆಗೆ ವಾಪಾಸ್ ಕರೆತಂದಿದ್ದರು. ಸ್ವಲ್ಪ ದಿನ ಇವರ ಮನೆಯಲ್ಲಿ ಶಾಂತಿ ನೆಲೆಸಿತ್ತು. ತದನಂತರದಲ್ಲಿ ಶ್ರೀನಿವಾಸ್ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿ ಪತ್ನಿ ಶೀಲ ಶಂಕಿಸಿ ಜಗಳವಾಡಿದ್ದಾನೆ.
ನಿನ್ನ ಬೆಳಿಗ್ಗೆ ಸುಧಾ ಅವರ ಪುತ್ರ ಅರ್ಜುನ್ ಸಿಂಗಹಳ್ಳಿಯಲ್ಲಿರುವ ಹಾಲಿನ ಡೈರಿ ಬಳಿಗೆ ಲಾರಿಗೆ ಹಾಲು ತುಂಬಿಸಲು ಹೋಗಿದ್ದಾರೆ.ಆ ವೇಳೆ ಸುಧಾ ಅವರು ಮನೆ ಹಿಂಬದಿ ಹಿತ್ತಲಿನಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ, ಕ್ಷುಲ್ಲಕ ವಿಚಾರಕ್ಕೆ ಪತ್ನಿ ಜೊತೆ ಜಗಳವಾಡಿ ಕೋಳಿ ಕತ್ತರಿಸುವ ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಕೈ ಬೆರಳು ತುಂಡಾಗಿದ್ದಲ್ಲದೆ ಕತ್ತಿಗೆ ಬಲವಾದ ಪೆಟ್ಟು ಬಿದ್ದು ಸಹಾಯಕ್ಕಾಗಿ ಕೂಗಿಕೊಂಡರಾದರೂ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.
ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಶ್ರೀನಿವಾಸ್ ಪರಾರಿಯಾಗಿದ್ದನು. ಈ ಬಗ್ಗೆ ಮಗ ನೀಡಿದ ದೂರು ದಾಖಲಿಸಿಕೊಂಡು ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿ ಶ್ರೀನಿವಾಸನನ್ನು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296