ಪಾವಗಡ: ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಯ ಪರಿಣಾಮವಾಗಿ ತುಮಕೂರು ಜಿಲ್ಲೆಯ ಅನೇಕ ಭಾಗಗಳಲ್ಲಿ ವಿಪರೀತ ಪ್ರವಾಹದ ಹಾವಳಿ ಉಂಟಾಗಿದೆ ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಹೇಳಿದೆ.
ಮಳೆ ಹಿನ್ನೆಲೆಯಲ್ಲಿ ಜಯಮಂಗಲಿ ನದಿಯ ಪ್ರವಾಹ ವಿಪರೀತವಾಗಿದ್ದು, ಅನೇಕ ಕಡೆ ಮನೆಗಳು ಕುಸಿದು ಬಿದ್ದಿವೆ. ಮಧುಗಿರಿ ತಾಲ್ಲೂಕಿನ ಸೂರನಾಗೇನಹಳ್ಳಿ ಮತ್ತು ಚನ್ನಸಾಗರ ಹಾಗೂ ಕೊರಟಗೆರೆ ತಾಲ್ಲೂಕಿನ ಅರಸಾಪುರ ಮುಂತಾದ ಪ್ರದೇಶಗಳಲ್ಲಿ ಭಾರೀ ಹಾನಿಯಾಗಿರುವುದು ತಿಳಿದು ಬಂದಿದೆ.
ಶ್ರೀರಾಮಕೃಷ್ಣ ಸೇವಾಶ್ರಮ ಎಂದಿನಂತೆ ಅನೇಕ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹೊರರಾಜ್ಯಗಳಲ್ಲಿಯೂ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿಯೂ ಕಳೆದ ಎರಡು ದಶಕಗಳಿಂದ ಏಕಪ್ರಕಾರವಾಗಿ ಪರಿಹಾರ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಧುಗಿರಿ ಹಾಗೂ ಕೊರಟಗೆರೆ ತಾಲ್ಲೂಕಿನ ನದಿ ದಂಡೆಯ ಭಾಗದಲ್ಲಿ ಅನೇಕ ನಷ್ಟ ಉಂಟಾಗಿರುವುದು ಇದೀಗ ತಿಳಿದು ಬಂದಿದೆ ಎಂದು ಹೇಳಿದೆ.
ಈ ನಿಟ್ಟಿನಲ್ಲಿ ಕೊರಟಗೆರೆ ತಾಲ್ಲೂಕಿನಿಂದ ಈ ಪರಿಹಾರ ಕಾರ್ಯವನ್ನು ಆರಂಭಿಸುತ್ತಿದ್ದೇವೆ. ಅತ್ಯಂತ ನಷ್ಟವನ್ನು ಅನುಭವಿಸಿರುವ ಕುಟುಂಬಗಳಿಗೆ ಟಾರ್ಪಾಲಿನ್, ದಿನಸಿ, ಹೊದಿಕೆ ಇತ್ಯಾದಿಗಳನ್ನು ತಕ್ಷಣದ ಪರಿಹಾರವಾಗಿ ನೀಡಲು ನಿರ್ಧರಿಸಿರುವುದಾಗಿ ಶ್ರೀರಾಮಕೃಷ್ಣ ಸೇವಾಶ್ರಮ ತಿಳಿಸಿದೆ.
ಸದ್ಯದಲ್ಲಿಯೇ ಮಳೆಯು ಸ್ವಲ್ಪ ಕಡಿಮೆಯಾದ ಸ್ಥಿತಿಯಲ್ಲಿ ಈ ಪರಿಹಾರ ಕಾರ್ಯವನ್ನು ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ಆರಂಭಿಸಲಾಗುತ್ತಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ವರದಿ. ರಾಮಪ್ಪ. ಸಿ.ಕೆ.ಪುರ. ಪಾವಗಡ ತಾಲ್ಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy