ಪಾವಗಡ: ತಾಲ್ಲೂಕಿನ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಮತ್ತು ಮೂಲಸೌಕರ್ಯಗಳ ಕೊರತೆ ಎದುರಾಗಿದ್ದು, ಚಿಕಿತ್ಸೆಗಾಗಿ ಬರುವ ನೂರಾರು ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಸ್ಪತ್ರೆಯಲ್ಲಿ ಕೆಮ್ಮು, ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗೂ ಔಷಧಗಳು ಲಭ್ಯವಿಲ್ಲ. ವೈದ್ಯರು ಬರೆದುಕೊಡುವ ಚೀಟಿಯಲ್ಲಿನ ಬಹುತೇಕ ಔಷಧಿಗಳನ್ನು ರೋಗಿಗಳು ಹೊರಗಿನ ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಸಾವಿರಾರು ರೂಪಾಯಿ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಇದೆ ಎನ್ನುವ ಆರೋಪ ಸದ್ಯ ಕೇಳಿ ಬಂದಿದೆ.
ವಾಂತಿ, ಭೇದಿಯಂತಹ ತುರ್ತು ಸಂದರ್ಭಗಳಲ್ಲಿಯೂ ಅಗತ್ಯ ಇಂಜೆಕ್ಷನ್ ಮತ್ತು ಔಷಧಗಳು ಸಿಗುತ್ತಿಲ್ಲ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಔಷಧ ಲಭ್ಯವಿಲ್ಲದ ಕಾರಣ ರೋಗಿಗಳು ಚಿಕಿತ್ಸೆ ಪಡೆಯಲಾಗದೆ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸ್ವಲ್ಪ ಮಟ್ಟಿಗೆ ನೀಗಿದ್ದರೂ, ಶಸ್ತ್ರಚಿಕಿತ್ಸೆ ಮತ್ತು ಹೆರಿಗೆ ಪ್ರಕರಣಗಳಿಗೆ ಅಗತ್ಯವಿರುವ ಸವಲತ್ತುಗಳು ಇಲ್ಲದ ಕಾರಣ ತಜ್ಞ ವೈದ್ಯರ ಸೇವೆ ರೋಗಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾತ್ರ ಉಚಿತವಾಗಿ ದೊರೆಯುತ್ತಿದ್ದು, ಔಷಧಕ್ಕಾಗಿ ಹಣ ಖರ್ಚು ಮಾಡಬೇಕಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕೂಡಲೇ ಆಸ್ಪತ್ರೆಗೆ ಅಗತ್ಯವಿರುವ ಔಷಧಗಳನ್ನು ಸರಬರಾಜು ಮಾಡಬೇಕು ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


