ಬೀದರ್ / ಔರಾದ್: ತಾಲೂಕಿನ ಸಂತಪೂರ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮಸ್ಥರ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಸುಲಭವಾಗಿ ‘ಇ-ಸ್ವತ್ತು’ ವಿತರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ‘ನನ್ನ ಸ್ವತ್ತು ನನ್ನ ಹಕ್ಕು’ ವಿಶೇಷ ಅಭಿಯಾನಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ಕಿರಣ ಪಾಟೀಲ್ ಅವರು ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಯೊಬ್ಬ ಮನೆ ಮಾಲೀಕರು ತಮ್ಮ ಆಸ್ತಿಯ ಸಂಪೂರ್ಣ ದಾಖಲೆಗಳನ್ನು ಪಂಚಾಯತಿಗೆ ಸಲ್ಲಿಸಿ, ಡಿಜಿಟಲೀಕೃತ ಇ–ಸ್ವತ್ತು ಖಾತೆಯನ್ನು ಪಡೆದುಕೊಳ್ಳಬೇಕು,” ಎಂದು ಮನವಿ ಮಾಡಿದರು.
ಅಭಿಯಾನದ ಮೊದಲ ದಿನವೇ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಒಟ್ಟು 47 ಅರ್ಜಿಗಳು ಸ್ವೀಕಾರಗೊಂಡಿವೆ. ಇವುಗಳಲ್ಲಿ 9 ಇ-ಸ್ವತ್ತು ದಾಖಲೆಗಳನ್ನು ಸ್ಥಳದಲ್ಲೇ ವಿತರಿಸಲಾಗಿದ್ದು, ಉಳಿದ ಅರ್ಜಿಗಳ ಪರಿಶೀಲನೆ ಹಾಗೂ ಪ್ರಕ್ರಿಯೆ ಪ್ರಗತಿಯಲ್ಲಿದೆ. ಗ್ರಾಮಸ್ಥರು ಈ ಸುವರ್ಣಾವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಅಧಿಕಾರಿಗಳು ಕೋರಿದ್ದಾರೆ.
ಮನೆ–ಮನೆಗೆ ತೆರಳಿ ಜಾಗೃತಿ:
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ (ಗ್ರಾ.ಉ) ಶಿವಕುಮಾರ ಘಾಟೆ ಮಾತನಾಡಿ, “ಈ ಮಹತ್ವಾಕಾಂಕ್ಷಿ ಅಭಿಯಾನದ ಯಶಸ್ಸಿಗಾಗಿ ಗ್ರಾಮ ಪಂಚಾಯತಿ ಸಿಬ್ಬಂದಿ ಈಗಾಗಲೇ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ನೀಡಿ ತಮ್ಮ ಆಸ್ತಿಯ ಇ-ಸ್ವತ್ತು ಡಿಜಿಟಲ್ ಖಾತೆ ಹೊಂದುವುದು ಅಗತ್ಯ,” ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಸಂತೋಷ ಪಾಟೀಲ್, ಮುಖಂಡರಾದ ಅಮರ ಬಿರಾದಾರ್, ಶಂಕರಸ್ವಾಮಿ, ರಾಜಕುಮಾರ್, ನಸೀರೊದ್ದಿನ್, ಗುಂಡಪ್ಪ, ಇರ್ಫಾನ್, ಕುಂದನಾಬಾಯಿ, ಶೋಭಾವತಿ, ಸುಮಿತ್ರಾದೇವಿ, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
