ಕೊರಟಗೆರೆ: ಯುವಜನತೆಯನ್ನು ಮಾದಕ ವ್ಯಸನದಂತಹ ಮಾರಕ ಅಭ್ಯಾಸಗಳಿಂದ ದೂರವಿಟ್ಟು, “ಡ್ರಗ್ಸ್ ಮುಕ್ತ ಕರ್ನಾಟಕ” ನಿರ್ಮಿಸುವ ಉದ್ದೇಶದಿಂದ ಕೊರಟಗೆರೆಯ ಎಂ.ಜಿ. ಪ್ಯಾಲೇಸ್ ನಲ್ಲಿ ಸೋಮವಾರ ಬೃಹತ್ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಯಿತು. ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ, ಕೊರಟಗೆರೆ ಪೊಲೀಸ್ ಇಲಾಖೆ ಹಾಗೂ ರಾಘವೇಂದ್ರ ಇಂಟರ್ನ್ಯಾಷನಲ್ ಶಾಲೆಯ ಜಂಟಿ ಸಹಯೋಗದಲ್ಲಿ ಈ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಪಿಯು ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯದರ್ಶಿನಿ ಪಿಯು ಕಾಲೇಜಿನ ಪ್ರಾಂಶುಪಾಲ ರುದ್ರೇಶ್, ವಿದ್ಯಾರ್ಥಿಗಳು ಯಾವುದೇ ದುಷ್ಟ ಆಮಿಷಗಳಿಗೆ ಒಳಗಾಗದೆ ಶಿಕ್ಷಣದತ್ತ ಸಂಪೂರ್ಣ ಗಮನ ಹರಿಸಬೇಕು ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ ಎಂದರು. ಡ್ರಗ್ಸ್ ಸೇವನೆ ಹಾಗೂ ಮಾರಾಟ ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕರು ಅಥವಾ ವಿದ್ಯಾರ್ಥಿಗಳು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ದಂಡಾಧಿಕಾರಿ ಮಂಜುನಾಥ್ ಮಾತನಾಡಿ, ಯುವಜನರು ದೇಶದ ಅಮೂಲ್ಯ ಆಸ್ತಿಯಾಗಿದ್ದು, ಅವರ ಭವಿಷ್ಯವನ್ನು ಸುರಕ್ಷಿತವಾಗಿಡುವುದು ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಅಂತೆಯೇ, ತಾಲೂಕು ಆರೋಗ್ಯಾಧಿಕಾರಿಗಳು ಮಾದಕ ವಸ್ತುಗಳ ಸೇವನೆಯಿಂದ ದೇಹ ಮತ್ತು ಮನಸ್ಸಿನ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳ ಕುರಿತು ವಿವರಿಸಿ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸುವ ಪ್ರತಿಜ್ಞೆ ಸ್ವೀಕರಿಸಿದರು. ಸಮಾಜದಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಉತ್ತಮ ಅರಿವು ಮೂಡಿಸುತ್ತಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
