ಹೊಳೆನರಸೀಪುರ: ತಾಲ್ಲೂಕಿನ ಕುಪ್ಪೆ ಗ್ರಾಮದಲ್ಲಿ ಬೀದಿ ದೀಪಗಳು ಕೆಟ್ಟು ಹೋಗಿ 35 ದಿನಗಳೇ ಕಳೆದಿದ್ದರೂ, ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಪ್ಪೆ ಬಸವೇಶ್ವರ ದೇವಸ್ಥಾನ ಹಾಗೂ ಕುಪ್ಪೆ ಬಸ್ ನಿಲ್ದಾಣದಂತಹ ಅತ್ಯಂತ ಜನನಿಬಿಡ ಮತ್ತು ಪ್ರಮುಖ ಪ್ರದೇಶಗಳಲ್ಲಿಯೇ ದೀಪಗಳು ಕೆಟ್ಟು ನಿಂತಿವೆ. ಸಂಜೆಯಾಗುತ್ತಿದ್ದಂತೆ ಇಡೀ ಪ್ರದೇಶ ಕತ್ತಲೆಯಲ್ಲಿ ಮುಳುಗುತ್ತಿದ್ದು, ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರು ಆತಂಕದಿಂದ ಓಡಾಡುವಂತಾಗಿದೆ. ಕತ್ತಲೆಯ ಲಾಭ ಪಡೆದು ಸಮಾಜಘಾತಕ ಶಕ್ತಿಗಳು ಹಾಗೂ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ರಸ್ತೆ ಸರಿಯಾಗಿ ಕಾಣದೆ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಸಣ್ಣಪುಟ್ಟ ಅಪಘಾತಗಳಿಗೆ ಸಿಲುಕುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ:
ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಮೌಖಿಕ ಹಾಗೂ ಲಿಖಿತ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ, ಕೂಡಲೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಮಧ್ಯಪ್ರವೇಶಿಸಿ, ಹಾಳಾಗಿರುವ ಬೀದಿ ದೀಪಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ಆಗ್ರಹಿಸಿ ಮಹೇಶ್ ಗಂಗೋತ್ರಿ ಹಾಗೂ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
