ಬೆಂಗಳೂರು: ಬೆಳಗಾವಿಯಲ್ಲಿ ಕನ್ನಡ ಧ್ವಜ ಸುಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಧ್ವಂಸಗೊಳಿಸಿ ಎಂಇಎಸ್ ಸಂಘಟನೆ ಪುಂಡಾಟಿಕೆ ಮೆರೆಯುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಾಳೆ ಬೆಳಗಾವಿ ಚಲೋ ನಡೆಸಲು ನಿರ್ಧರಿಸಿವೆ.
ಕರ್ನಾಟಕ ರಕ್ಷಣಾ ವೇದಿಕೆಯ ಒಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಇಂದು ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಪರ ಹೋರಾಟಗಾರರು ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ನಿಂದ ಬೆಳಗಾವಿ ಚಲೋ ಕಾರ್ಯಕ್ರಮ ಆರಂಭವಾಗಲಿದೆ. ಸೋಮವಾರ ಬೆಳಗ್ಗೆ ರ್ಯಾಲಿಗಳು ಬೆಳಗಾವಿಯ ಸುವರ್ಣ ಸೌಧ ತಲುಪುವ ನಿರೀಕ್ಷೆ ಇದೆ ಎನ್ನಲಾಗಿದೆ.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ಕಾರು, ಬೈಕು, ಬಸ್, ರೈಲುಗಳ ಮೂಲಕ ಹೊರಟು ಸೋಮವಾರ ಬೆಳಗ್ಗೆ ಬೆಳಗಾವಿ ತಲುಪಲು ಸೂಚನೆ ನೀಡಲಾಗಿದೆ. ನೆಲಮಂಗಲದ ಹಾದಿಯಲ್ಲಿ ಪುಣೆ ಹೆದ್ದಾರಿಯಲ್ಲಿ ರ್ಯಾಲಿಗಳು ಸಾಗಲಿವೆ.
ಕನ್ನಡಪರ ಹೋರಾಟ ಮತ್ತು ಪ್ರತಿಭಟನೆಗೆ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ರಾಯಣ್ಣ ಅಭಿಮಾನಿ ಸಂಘಟನೆಗಳು ಕೂಡ ಈ ರ್ಯಾಲಿಗೆ ಕೈಜೋಡಿಸಲಿದೆ ಎಂದು ಹೇಳಲಾಗಿದೆ. ರೈತ ಮುಖಂಡ ಕುರುಬೂರು ಶಾಂತಕುಮಾರ್, ಕರವೇ ಮತ್ತೊಂದು ಬಣದ ನಾರಾಯಣಗೌಡ ಮೊದಲಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700