ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಜವನಗೊಂಡನಹಳ್ಳಿ ಹೋಬಳಿಯ ಬಗ್ಗನಡು ಗೇಟ್ ಬಳಿ ಟೆಂಪೂ ಟ್ರಾವೆಲರ್ ವಾಹನವು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಶ್ವೇತಾ (24), ಟೆಂಪೊ ಟ್ರಾವೆಲರ್ ಕ್ಲೀನರ್ ಅರಿಕ್ಯದಾಸ್ (19) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತ ಯುವತಿಯು ಬೆಂಗಳೂರಿನ ಪಿ.ಎಸ್.ಕೆ. ನಾಯ್ಡು ರಸ್ತೆ,ಮು ದ್ದಮ್ಮ ಗಾರ್ಡನ್ ನ ಫ್ರೇಜರ್ ಟೌನ್ ಬೆಂಗಳೂರು ವಾಸಿ ಎಂದು ಹೇಳಲಾಗಿದೆ.
ಬೆಂಗಳೂರಿನ ಇಂಡಿಯನ್ ಅಕಾಡೆಮಿ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಮಾಡಿದ್ದ 2013ರ ಬ್ಯಾಚ್ ನ ಒಟ್ಟು 11 ಮಂದಿ ಸ್ನೇಹಕೂಟ (ಗೆಟ್ ಟುಗೆದರ್) ಮಾಡಲು ಮಾರ್ಚ್ 10ರಂದು ಉಡುಪಿ, ಗೋಕರ್ಣಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಶಿರಸಿ ಮಾರ್ಗವಾಗಿ ದಾವಣಗೆರೆ , ಚಿತ್ರದುರ್ಗದ ಮೂಲಕ ಬೆಂಗಳೂರಿಗೆ ವಾಪಸ್ ಆಗುವ ವೇಳೆ ಈ ದುರ್ಘಟನೆ ನಡೆದಿದೆ.
ಕ್ಲೀನರ್ ಅರಿಕ್ಯದಾಸ್ ಸ್ಥಳದಲ್ಲೇ ಮೃತ ಪಟ್ಟರೆ, ಶ್ವೇತಾ ಅವರು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಂತೋಷ್ ಕುಮಾರ್, ದೀಪನ್ ಕಾರ್ತಿಕ್, ಪೂರ್ಣಿಮಾ ಜೆಸ್ಸಿ, ಕಾರ್ತಿಕ್ , ಸಂತೋಷ್ ಸೈಯದ್ ಸುಹೇಬ್, ಅರುಳಮಾರಿಯಾ, ಶರತ್ ಕುಮಾರ್ ಹಾಗೂ ವಾಹನದ ಚಾಲಕ ಪ್ರದೀಪ್ ರಾಜ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಹಿರಿಯೂರು ನಗರದ ಗ್ರಾಮಾಂತರ ಪೋಲಿಸ್ ಠಾಣೆಯ ಪಿ ಎಸ್ ಐ ಯಾದ ಡಿ.ಜಿ.ಪರಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ )